ಪೂರ್ವ ಲಡಾಖ್‌ನಲ್ಲಿ ಭಾರತೀಯ ಸೇನೆಯನ್ನು ಹಿಂದೆಗೆದದ್ದು ಚೀನಾಕ್ಕೆ ಶರಣಾದಂತಿದೆ: ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ

ಹೊಸದಿಲ್ಲಿ, ಫೆ.14: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆ ಮತ್ತು ಪ್ಯಾಂಗ್ಯಾಂಗ್ ಸರೋವರ ಪ್ರದೇಶದಿಂದ ಭಾರತದ ಸೇನೆಯನ್ನು ಹಿಂದಕ್ಕೆ ಕರೆಸಿರುವುದು ಮತ್ತು ಇಲ್ಲಿ ಬಫರ್ ವಲಯ ನಿರ್ಮಿಸಿರುವುದು ಭಾರತದ ಹಕ್ಕುಗಳನ್ನು ಬಿಟ್ಟುಕೊಟ್ಟು ಶರಣಾದಂತೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ರಕ್ಷಣಾ ಸಚಿವ ಎಕೆ ಆ್ಯಂಟನಿ ಟೀಕಿಸಿದ್ದಾರೆ.
ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚೀನಾವು ಯುದ್ಧೋತ್ಸುಕವಾಗಿರುವ ಮತ್ತು ಪಾಕಿಸ್ತಾನ ಭಯೋತ್ಪಾದನೆಗೆ ನೆರವು ಮುಂದುವರಿಸುತ್ತಿರುವ ಈ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ ಸರಕಾರ ದೇಶದ ಸುರಕ್ಷತೆ ಮತ್ತು ಭದ್ರತೆಗೆ ಆದ್ಯತೆ ನೀಡದಿರುವುದು ವಿಷಾದನೀಯ ಎಂದರು.
ಸೇನೆ ಹಿಂದೆಗೆತದಿಂದ ಪ್ರಕ್ಷುಬ್ಧದ ಪರಿಸ್ಥಿತಿ ತಿಳಿಯಾಗುವುದರಿಂದ ಇದು ಉತ್ತಮ ಕ್ರಮವಾಗಿದೆ. ಆದರೆ ಇದಕ್ಕಾಗಿ ದೇಶದ ಸುರಕ್ಷತೆಯನ್ನು ತ್ಯಾಗ ಮಾಡುವುದು ಸರಿಯಲ್ಲ. ಪಾರಂಪರಿಕವಾಗಿ ಭಾರತದ ನಿಯಂತ್ರಣದಲ್ಲಿದ್ದ ಗಲ್ವಾನ್ ಕಣಿವೆ ಮತ್ತು ಪ್ಯಾಂಗ್ಯಾಂಗ್ ಪ್ರದೇಶದಿಂದ ನಮ್ಮ ಸೇನೆ ಹಿಂದಕ್ಕೆ ಸರಿದಿರುವುದು ಸರಿಯಲ್ಲ. ಈ ಮೂಲಕ ನಮ್ಮ ಹಕ್ಕುಗಳನ್ನು ಬಿಟ್ಟುಕೊಟ್ಟಂತಾಗಿದೆ. ಸೇನೆ ಹಿಂದೆಗೆತ ಮತ್ತು ಬಫರ್ ವಲಯ ನಿರ್ಮಾಣದ ಮಹತ್ವದ ಬಗ್ಗೆ ಸರಕಾರಕ್ಕೆ ತಿಳುವಳಿಕೆಯಿಲ್ಲ . ಸಿಯಾಚಿನ್‌ನಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡುವ ಮೂಲಕ ಚೀನಾ ಯಾವುದೇ ಸಮಯದಲ್ಲಿ ಕಿರುಕುಳ ಮುಂದುವರಿಸಬಹುದು ಎಂದವರು ಎಚ್ಚರಿಸಿದರು. ಗಡಿಯಲ್ಲಿ ಭಾರತಕ್ಕೆ ಹಲವು ಸವಾಲುಗಳು ಎದುರಾಗಿರುವ ಮತ್ತು ಎರಡು ಮುಂಚೂಣಿ ವಲಯದಲ್ಲಿ ಯುದ್ಧದ ರೀತಿಯ ವಾತಾವರಣ ನೆಲೆಸಿರುವ ಈ ಸಂದರ್ಭದಲ್ಲಿ , ಈ ವರ್ಷದ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಅತ್ಯಲ್ಪ ಪ್ರಮಾಣದ ಅನುದಾನ ಒದಗಿಸಿರುವುದು ದೇಶಕ್ಕೆ ಮಾಡಿದ ದ್ರೋಹವಾಗಿದೆ ಎಂದು ಆರೋಪಿಸಿದರು.
ಭಾರತ-ಚೀನಾ ಗಡಿಭಾಗದಲ್ಲಿ 2020ರ ಎಪ್ರಿಲ್ ಸಂದರ್ಭದಲ್ಲಿದ್ದಂತಹ ಸ್ಥಿತಿ ಯಾವಾಗ ನೆಲೆಸಬಹುದು , ಈ ನಿಟ್ಟಿನಲ್ಲಿ ಸರಕಾರದ ಯೋಜನೆಯೇನು ಎಂದು ಪ್ರಶ್ನಿಸಿದ ಅವರು, ಗಡಿಭಾಗದಲ್ಲಿ ಯಥಾಸ್ಥಿತಿ ಮರುಸ್ಥಾಪನೆಯ ವಿಷಯದಲ್ಲಿ ಸರಕಾರ ದೇಶ ಮತ್ತು ಜನತೆಯನ್ನು ವಿಶ್ವಾಸಕ್ಕೆ ಪಡೆದು ಮುಂದುವರಿಯಬೇಕು ಎಂದವರು ಆಗ್ರಹಿಸಿದರು.







