ತಮಿಳುನಾಡು: ದೇಶಿ ನಿರ್ಮಿತ ಅರ್ಜುನ್ ಸಮರ ಟ್ಯಾಂಕ್ ಅನ್ನು ಸೇನೆಗೆ ಹಸ್ತಾಂತರಿಸಿದ ಪ್ರಧಾನಿ

ಚೆನ್ನೈ, ಫೆ. 14: ದೇಶಿಯವಾಗಿ ಅಭಿವೃದ್ಧಿಗೊಳಿಸಿದ ಪ್ರಮುಖ ಯುದ್ಧ ವಿಮಾನ ಅರ್ಜನ್ ಟ್ಯಾಂಕ್ (ಮಾರ್ಕ್ 1ಎ) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈಯಲ್ಲಿ ರವಿವಾರ ಸೇನಾ ವರಿಷ್ಠ ಎಂ.ಎಂ. ನರವಣೆ ಅವರಿಗೆ ಹಸ್ತಾಂತರಿಸಿದರು.
ಮುಂದಿನ ವರ್ಷ ವಿಧಾನ ಸಭೆ ಚುನಾವಣೆ ನಡೆಯಲಿರುವ ತಮಿಳುನಾಡಿನಲ್ಲಿ ವಿವಿಧ ಯೋಜನೆಗಳನ್ನು ಲೋಕಾರ್ಪಣೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈಗೆ ಆಗಮಿಸಿದರು.
ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಚೆನ್ನೈಯಲ್ಲಿರುವ ಸಮರ ವಾಹನಗಳ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ದೇಶೀಯವಾಗಿ ವಿನ್ಯಾಸಗೊಳಿಸಿದ, ಅಭಿವೃದ್ಧಿಪಡಿಸಿದ ಹಾಗೂ ನಿರ್ಮಿಸಿದ ಅತ್ಯಾಧುನಿಕ ಸಮರ ಟ್ಯಾಂಕ್‌ನ ಗೌರವ ರಕ್ಷೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಕರಿಸಿದರು.
ಸುಮಾರು 8,400 ಕೋಟಿ ರೂಪಾಯಿ ವೆಚ್ಚದ 118 ಅರ್ಜುನ್ ಮಾರ್ಕ್ 1ಎ ಟ್ಯಾಂಕ್‌ಗಳನ್ನು ಭಾರತೀಯ ಸೇನೆಗೆ ನಿಯೋಜಿಸಲು ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಸಂದರ್ಭ ಎರಡು ರೈಲ್ವೆ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದರು ಹಾಗೂ ಮದ್ರಾಸ್‌ನ ಐಐಟಿಯ ಡಿಸ್ಕವರಿ ಕ್ಯಾಂಪಸ್‌ಗೆ ಶಂಕು ಸ್ಥಾಪನೆ ನೆರವೇರಿಸಿದರು. ಅಲ್ಲದೆ, ಚೆನ್ನೈ ಮೆಟ್ರೋ ರೈಲಿನ 9 ಕಿ.ಮೀ. ಉದ್ದದ ಮಾರ್ಗವನ್ನು ಉದ್ಘಾಟಿಸಿದರು.







