ಎರಡನೇ ಟ್ವೆಂಟಿ-20: ದಕ್ಷಿಣ ಆಫ್ರಿಕಕ್ಕೆ ಜಯ
ಲಾಹೋರ್: ಇಲ್ಲಿ ನಡೆದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಪ್ರವಾಸಿ ದಕ್ಷಿಣ ಆಫ್ರಿಕ ತಂಡ 6 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿದೆ.
ಗೆಲುವಿಗೆ 145 ರನ್ ಗಳಿಸಬೇಕಿದ್ದ ದಕ್ಷಿಣ ಆಫ್ರಿಕ ತಂಡ ಇನ್ನೂ 22 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು.
ಆಫ್ರಿಕ ತಂಡದ ರೀಝಾ ಹೆಂಡ್ರಿಕ್ಸ್ (42) ಮತ್ತು ಪೈಟ್ ವ್ಯಾನ್ ಬಿಲ್ಜಾನ್ (42), ಡೇವಿಡ್ ಮಿಲ್ಲರ್ ಔಟಾಗದೆ 25 ರನ್ ಮತ್ತು ನಾಯಕ ಹೆನ್ರಿಕ್ ಕ್ಲಾಸೆನ್ ಔಟಾಗದೆ 17 ರನ್ ಸೇರಿಸಿ ತಂಡದ ಗೆಲುವಿಗೆ ನೆರವಾದರು. ಇದರೊಂದಿಗೆ ಆಫ್ರಿಕ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಇದಕ್ಕೂ ಮೊದಲು ದಕ್ಷಿಣ ಆಫ್ರಿಕ ತಂಡ ಟಾಸ್ ಜಯಿಸಿ ಪಾಕಿಸ್ತಾನವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ವೇಗದ ಬೌಲರ್ ಡ್ವೇನ್ ಪ್ರಿಟೋರಿಯಸ್ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕ 7 ವಿಕೆಟ್ ನಷ್ಟದಲ್ಲಿ 144 ರನ್ ಗಳಿಸಿತ್ತು. ಪ್ರಿಟೋರಿಯಸ್ ದಕ್ಷಿಣ ಆಫ್ರಿಕ ಪರ ಶ್ರೇಷ್ಠ ಪ್ರದರ್ಶನ ನೀಡಿ 17ಕ್ಕೆ 5 ವಿಕೆಟ್ ಪಡೆದರು. ಇದು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕದ ಬೌಲರ್ ನೀಡಿರುವ ಶ್ರೇಷ್ಠ ಪ್ರದರ್ಶನವಾಗಿದೆ.
ಪಾಕಿಸ್ತಾನ ಮುಹಮ್ಮದ್ ರಿಝ್ವಾನ್(51), ಫಹೀಮ್ ಅಶ್ರಫ್(ಔಟಾಗದೆ 30) , ಇಫ್ತಿಕರ್ ಅಹ್ಮದ್(20) ನೆರವಿನಲ್ಲಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 144 ರನ್ ಗಳಿಸಿತ್ತು. ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ 144/7 (ಮುಹಮ್ಮದ್ ರಿಝ್ವಾನ್ 51; ಡ್ವೇನ್ ಪ್ರಿಟೋರಿಯಸ್ 17ಕ್ಕೆ 5); ದಕ್ಷಿಣ ಆಫ್ರಿಕ 145/4 (ರೀಝಾ ಹೆಂಡ್ರಿಕ್ಸ್ 42, ವ್ಯಾನ್ ಬಿಲ್ಜಾನ್ 42; ಶಾಹೀನ್ ಅಫ್ರಿದಿ 18ಕ್ಕೆ 2)







