ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಪಿ.ಬಿ.ಸಾವಂತ್ ನಿಧನ

ಪುಣೆ: ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶ ಪಿ.ಬಿ. ಸಾವಂತ್ ಅವರು ಪುಣೆಯಲ್ಲಿ ಸೋಮವಾರ ಬೆಳಗ್ಗೆ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ವಯೋಸಹಜ ಸಮಸ್ಯೆಯಿಂದಾಗಿ ಅವರು ಸೋಮವಾರ ಬೆಳಗ್ಗೆ 9:30ಕ್ಕೆ ತಮ್ಮ ನಿವಾಸದಲ್ಲಿ ನಿಧನರಾದರು. ಅವರು ಕಳೆದ ಕೆಲವು ಸಮಯದಿಂದ ಅನಾರೋಗ್ಯ ಪೀಡಿತರಾಗಿದ್ದರು. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ ಎಂದು ಬಾಂಬೆ ಹೈಕೋರ್ಟ್‍ನ ಮಾಜಿ ನ್ಯಾಯಾಧೀಶ ಬಿ.ಜಿ.ಕೋಲ್ಸೆ ಪಾಟೀಲ್ ಹೇಳಿದ್ದಾರೆ. ಪಾಟೀಲ್ ಅವರು ಸಾವಂತ್ ಅವರೊಂದಿಗೆ ಸುದೀರ್ಘ ಒಡನಾಟ ಹೊಂದಿದ್ದರು.
ಸುಪ್ರೀಂಕೋರ್ಟ್‍ನ ವೆಬ್ ಸೈಟ್ ಪ್ರಕಾರ, ಸಾವಂತ್ 1930, ಜೂನ್ 30 ರಂದು ಜನಿಸಿದ್ದರು. ಅವರು ಬಾಂಬೆ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟಿ ನಲ್ಲಿ 1957ರಲ್ಲಿ ವಕೀಲರಾಗಿ ಅಭ್ಯಾಸ ಮಾಡಿದ್ದರು. 1973ರಲ್ಲಿ ಬಾಂಬೆ ಹೈಕೋರ್ಟಿನ ನ್ಯಾಯಾಧೀಶರನ್ನಾಗಿ ನೇಮಿಸಲಾಗಿತ್ತು. ನ್ಯಾಯಾಧೀಶರಾಗಿ 1982ರ ಜೂನ್ ಏರ್‍ಇಂಡಿಯ ವಿಮಾನ ಅಪಘಾತದ ಬಗ್ಗೆ ವಿಚಾರಣೆ ನಡೆಸಿದ್ದರು. ಹಲವಾರು ಟ್ರೇಡ್ ಯೂನಿಯನ್ ಗಳು, ಸಾಮಾಜಿಕ ಹಾಗೂ ಕಾನೂನು ಸಲಹೆಗಾರರಾಗಿದ್ದರು. 1989, ಅಕ್ಟೋಬರ್ 6ರಂದು ಜಾರಿಗೆ ಬರುವಂತೆ ಸುಪ್ರೀಂಕೋರ್ಟ್ ಪೀಠ ಏರಿದ್ದರು. ಅವರು ಜೂ.6,1995ರಂದು ನಿವೃತ್ತರಾದರು. ಅಂದಿನಿಂದ ಸಾರ್ವಜನಿಕ ವಿಚಾರದಲ್ಲಿ ಸಕ್ರಿಯರಾಗಿದ್ದರು.







