'ಗೋ ಬ್ಯಾಕ್ ಮೋದಿ' ಟ್ವೀಟ್ ಮಾಡಿದ ಖ್ಯಾತ ತಮಿಳು ನಟಿ ಓವಿಯಾ ವಿರುದ್ಧ ದೂರು ನೀಡಿದ ಬಿಜೆಪಿ ಸದಸ್ಯ

ಚೆನ್ನೈ: 'ಗೋಬ್ಯಾಕ್‍ಮೋದಿ' ಹ್ಯಾಶ್ ಟ್ಯಾಗ್ ಬಳಸಿ ನಟಿ ಓವಿಯಾ ಅವರು ಟ್ವೀಟ್ ಮಾಡಿದ ಮರುದಿನವೇ ತಮಿಳುನಾಡು ಬಿಜೆಪಿಯ ಕಾನೂನು ಘಟಕದ ಸದಸ್ಯ ಹಾಗೂ ವಕೀಲ ಅಲೆಕ್ಸಿಸ್ ಸುಧಾಕರ್ ಅವರು ಸೈಬರ್ ಕ್ರೈಂ ಪೊಲೀಸ್ ಘಟಕಕ್ಕೆ ದೂರು ನೀಡಿ ಆಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಚೆನ್ನೈಗೆ ರವಿವಾರ ಆಗಮಿಸಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುವುದಕ್ಕೆ ಮುನ್ನ ಮೇಲಿನ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಲಾಗಿತ್ತು.
ಆಕೆಯ ಟ್ವೀಟ್ ಕುರಿತು ತನಿಖೆ ನಡೆಸುವಂತೆ ಹಾಗೂ ಪ್ರಧಾನಿ ಮೋದಿ ಆಗಮನದ ಮುನ್ನ ಜನರ ಭಾವನೆಗಳನ್ನು ಕೆರಳಿಸುವ ಉದ್ದೇಶ ಹೊಂದಿತ್ತೇ ಎಂದು ತಿಳಿದು ನಂತರ ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಬಿಗ್ ಬಾಸ್ ತಮಿಳ್ ಮೂಲಕ ಖ್ಯಾತಿ ಪಡೆದಿರುವ ಓವಿಯಾ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಿದ್ದರು.
ಓವಿಯಾರಂತಹವರ ಜತೆಗೆ ಚೀನಾ ಮತ್ತು ಶ್ರೀಲಂಕಾ ಕಾರ್ಯಾಚರಿಸಿ ಭಾರತದ ಸಾರ್ವಭೌಮತೆಗೆ ಭಂಗ ತರುವ ಹಾಗೂ ಇಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಲು ಯತ್ನಿಸುತ್ತಿವೆ, ಕೆಲ ರಾಜಕೀಯ ಪಕ್ಷಗಳೂ ಚೆನ್ನೈ ಸುತ್ತಮುತ್ತ ಶಾಂತಿ ಭಂಗ ನಡೆಸುವ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದರೂ ಯಾವುದೇ ಪುರಾವೆ ಒದಗಿಸಲಾಗಿಲ್ಲ.
ಓವಿಯಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು, ಆಕೆ ಭಾರತೀಯ ಪೌರತ್ವ ಹೊಂದಿದ್ದಾರೆಯೇ ಎಂಬುದನ್ನು ಪರಾಮರ್ಶಿಸಲು ಆಕೆಯ ಪಾಸ್‍ಪೋರ್ಟ್ ಪರಿಶೀಲಿಸಬೇಕು ಹಾಗೂ ಆಕೆ ವಿದೇಶಗಳಲ್ಲಿ ನಂಟು ಹೊಂದಿದ್ದಾರೆಯೇ ಎಂದು ತನಿಖೆ ನಡೆಸಬೇಕೆಂದೂ ಅಲೆಕ್ಸಿಸ್ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.
— Oviyaa (@OviyaaSweetz) February 13, 2021







