ಬಿಜೆಪಿಯಿಂದ ಗರೀಬೋಂಕೋ ಹಠಾವೊ ಯತ್ನ: ಯು.ಟಿ.ಖಾದರ್ ವ್ಯಂಗ್ಯ

ಮಂಗಳೂರು, ಫೆ.15: ಬೈಕ್, ಟಿವಿ, ಫ್ರಿಡ್ಜ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದುಪಡಿಸುವ ರಾಜ್ಯದ ಆಹಾರ ಸಚಿವರ ಹೇಳಿಕೆ ಜನವಿರೋಧಿಯಾಗಿದೆ ಎಂದು ಶಾಸಕ ಹಾಗೂ ಆಹಾರ ಇಲಾಖೆಯ ಮಾಜಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಗರೀಬಿ ಹಠಾವೊ ಘೋಷಣೆಯೊಂದಿಗೆ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರೆ, ಆ ವ್ಯವಸ್ಥೆಯನ್ನು ನಾಶ ಮಾಡುವ ಮೂಲಕ ಬಿಜೆಪಿ ಸರಕಾರ ಗರೀಂಬೋಕೊ ಹಠಾವೊ ಪ್ರಯತ್ನಕ್ಕೆ ಮುಂದಾಗಿರುವಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.
2008ರಿಂದ 2013ರವರೆಗೆ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಇದೇ ರೀತಿಯ ಕಾನೂನು ತರಲಾಗಿತ್ತು. ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಆಧಾರ್ ಕಾರ್ಡ್ ಇದ್ದವರಿಗೆ ರೇಶನ್ ಕಾರ್ಡ್ ಹಾಗೂ 1.20 ಲಕ್ಷ ರೂ. ಆದಾಯ ಹೊಂದಿರುವವರಿಗೆ ರೇಶನ್ ಕಾರ್ಡ್ ದೊರೆಯುವ ಜತೆಗೆ ಪೊರ್ಟೆಬೆಲಿಟಿ ವ್ಯವಸ್ಥೆ ಜಾರಿಗೊಳಿಸಿ ಹಕ್ಕಿಪಿಕ್ಕಿ ಜನಾಂಗ ಸೇರಿದಂತೆ ಅಲೆಮಾರಿಗಳಿಗೂ ಬಿಪಿಎಲ್ ಕಾರ್ಡ್ ದೊರೆಯುವಂತೆ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಆಹಾರ ಸಚಿವರ ಹೇಳಿಕೆ ಜನಸಾಮಾನ್ಯರಿಗೆ ಮುಳುವಾಗಿದೆ. ಈಗಾಗಲೇ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಕೆ ಮಾಡಲಾಗಿದೆ. ಇಲ್ಲಾ ಇಲಾಖೆ ಯೋಜನೆಗಳಲ್ಲಿಯೂ ಶೇ. 5ರಷ್ಟು ತಪ್ಪುಗಳು, ದುರುಪಯೋಗ ಸಹಜ. ಅದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವ ಬದಲು ಸರಕಾರ ಬಡವರಿಗೆ ಸಿಗುತ್ತಿರುವ ಪಡಿತರ ವ್ಯವಸ್ಥೆಯನ್ನೇ ಬಂದ್ ಮಾಡಲು ಮುಂದಾಗಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಆಹಾರ ಸಚಿವರು ತಮ್ಮ ಹೇಳಿಕೆ ಬಗ್ಗೆ ಪುನರ್ ಪರಿಶೀಲಿಸಬೇಕು. ಮಾತ್ರವಲ್ಲದೆ ಅಕ್ಕಿ ಬದಲು ದ.ಕ. ಜಿಲ್ಲೆಯಲ್ಲಿ ರಾಗಿ ನೀಡುವ ಯೋಜನೆಯ ಬದಲು ಕುಚ್ಚಲಕ್ಕಿ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಹೇಳಿದರು.
ಗೋಷ್ಠಿಯಲ್ಲಿ ಟಿ.ಕೆ. ಸುಧೀರ್, ನೀರಜ್ ಪಾಲ್, ಮುಹಮ್ಮದ್ ಕುಂಜತ್ತಬೈಲ್, ದುರ್ಗಾಪ್ರಸಾದ್, ಆರಿಫ್ ಮೊದಲಾದವರು ಉಪಸ್ಥಿತರಿದ್ದರು.
ಟೋಲ್ ಸಮಸ್ಯೆ ಅಲ್ಲ- ಜನಪ್ರತಿನಿಧಿಗಳೇ ಸಮಸ್ಯೆ!
ಸುರತ್ಕಲ್‌ನ ಟೋಲ್ ಅಕ್ರಮವಾಗಿದ್ದು ಅದನ್ನು ಸ್ಥಗಿತಗೊಳಿಸಬೇಕೆಂದು ಹೋರಾಟದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಯು.ಟಿ.ಖಾದರ್ ಈಗ ಟೋಲ್ ಸಮಸ್ಯೆ ಅಲ್ಲ ಬದಲಿಗೆ ಜನಪ್ರತಿನಿಧಿಗಳೇ ಸಮಸ್ಯೆ ಎಂದು ಹೇಳಿದರು.
ಈ ಹಿಂದೆ ಸುರತ್ಕಲ್ ಟೋಲ್ ಬಗ್ಗೆ ಪ್ರತಿಭಟನೆ ಆದಾಗ ಖುದ್ದು ಸಂಸದರು ಹಾಗೂ ಸ್ಥಳೀಯ ಶಾಸಕರೇ ಮೂರು ತಿಂಗಳಲ್ಲಿ ಅದನ್ನು ರದ್ದುಪಡಿಸುವದಾಗಿ ಹೇಳಿ ಎರಡು ವರ್ಷಗಳಾಗಿವೆ. ಈಗ ಸುದ್ದಿಯೇ ಇಲ್ಲ. ಸ್ಥಳೀಯ ಜನಪ್ರತಿನಿಧಿಗಳು ಸರಿ ಇದ್ದಿದ್ದರೆ ಟೋಲ್ ಸಮಸ್ಯೆಯನ್ನು ಈಗಾಗಲೇ ಬಗೆಹರಿಸಬುದಿತ್ತು ಎಂದು ಅವರು ಹೇಳಿದರು.







