ವೇದಿಕೆಯಲ್ಲಿ ಕುಸಿದು ಬಿದ್ದ ಕೆಲವೇ ಗಂಟೆಗಳಲ್ಲಿ ಗುಜರಾತ್ ಸಿಎಂ ವಿಜಯ್ ರೂಪಾನಿಗೆ ಕೋವಿಡ್ ಪಾಸಿಟಿವ್

ಹೊಸದಿಲ್ಲಿ: ವಡೋದರಾದಲ್ಲಿ ರವಿವಾರ ಚುನಾವಣಾ ರ್ಯಾಲಿ ಸಂದರ್ಭ ಮಾತನಾಡುತ್ತಿರುವ ವೇಳೆ ವೇದಿಕೆಯಲ್ಲಿಯೇ ಕುಸಿದು ಬಿದ್ದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ವಡೋದರಾದಲ್ಲಿ ರೂಪಾನಿ ಕುಸಿದು ಬಿದ್ದ ತಕ್ಷಣ ಅವರನ್ನು ಅಹ್ಮದಾಬಾದ್‍ನಲ್ಲಿನ ಆಸ್ಪತ್ರೆಗೆ ವಿಮಾನ ಮೂಲಕ ಸಾಗಿಸಿ ಕೋವಿಡ್ ಪರೀಕ್ಷೆ ನಡೆಸಿದಾಗ ಅವರಿಗೆ ಸೋಂಕು ತಗಲಿರುವುದು ಖಚಿತವಾಗಿದೆ.
ರೂಪಾನಿ ಅವರಿಗೆ ಕೋವಿಡ್ ಸೋಂಕಿನ ಅಲ್ಪ ಲಕ್ಷಣಗಳಿವೆ. ರಾಜ್ಯದ ಇತರ ಇಬ್ಬರು ಬಿಜೆಪಿ ನಾಯಕರುಗಳಾದ ಸಂಸದ ವಿನೋದ್ ಚಾವ್ಡ ಹಾಗೂ ಬಿಖುಭಾಯಿ ದಲ್ಸಾನಿಯಾ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ.
64 ವರ್ಷದ ರೂಪಾನಿ ವಡೋದರಾದಲ್ಲಿ ಮುನಿಸಿಪಲ್ ಚುನಾವಣೆಗಾಗಿ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭ ವೇದಿಕೆಯಲ್ಲಿ ಕುಸಿದ ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆಯನ್ನು ವಡೋದರಾ ಬಿಜೆಪಿ ಅಧ್ಯಕ್ಷ ಡಾ ವಿಜಯ್ ಶಾ ನೀಡಿದ್ದರು. ನಂತರ ಸುಧಾರಿಸಿಕೊಂಡ ರೂಪಾನಿ ನಡೆದುಕೊಂಡೇ ತಮ್ಮ ಕಾರಿನ ಬಳಿ ತೆರಳಿದರು ಎಂದು ಶಾ ಮಾಹಿತಿ ನೀಡಿದ್ದಾರೆ.
ರೂಪಾನಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರ ಎಲ್ಲಾ ಇತರ ವೈದ್ಯಕೀಯ ಪರೀಕ್ಷಾ ವರದಿಗಳೂ ನಾರ್ಮಲ್ ಆಗಿವೆ ಎಂದು ಅಹ್ಮದಾಬಾದ್‍ನಲ್ಲಿ ರೂಪಾನಿ ಅವರನ್ನು ದಾಖಲಿಸಲಾಗಿರುವ ಯುಎನ್ ಮೆಹ್ತಾ ಆಸ್ಪತ್ರೆಯ ನಿರ್ದೇಶಕ ಡಾ ಆರ್ ಕೆ ಪಾಟೀಲ್ ಹೇಳಿದ್ದಾರೆ.







