ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ನಮನ್ ಓಜಾ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ

ಹೊಸದಿಲ್ಲಿ: ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ನಮನ್ ಓಜಾ ಎಲ್ಲ ಮಾದರಿಯ ಕ್ರಿಕೆಟ್ ನಿಂದ ಇಂದು ವಿದಾಯ ಪ್ರಕಟಿಸಿದ್ದಾರೆ. ಓಜಾ 2010ರಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟಿದ್ದರು. ಹರಾರೆಯಲ್ಲಿ ಶ್ರೀಲಂಕಾ ವಿರುದ್ಧ ಏಕೈಕ ಏಕದಿನ ಪಂದ್ಯವನ್ನು ಆಡುವ ಮೂಲಕ ತನ್ನ ವೃತ್ತಿಜೀವನವನ್ನು ಕೊನೆಗೊಳಿಸಿದ್ದರು. ಓಜಾ ಎಲ್ಲ 3 ಮಾದರಿಯ ಕ್ರಿಕೆಟ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಜೂನ್ 5ರಂದು ಚೊಚ್ಚಲ ಏಕದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಓಜಾ, ವಾರದ ಬಳಿಕ ಭಾರತದ ಪರವಾಗಿ ಚೊಚ್ಚಲ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಓಜಾ ಭಾರತದ ಪರ ಕೇವಲ 2 ಏಕದಿನ ಪಂದ್ಯವನ್ನಾಡಿದ್ದು, ಎರಡೂ ಪಂದ್ಯವನ್ನು ಝಿಂಬಾಬ್ವೆ ವಿರುದ್ಧವೇ ಆಡಿದ್ದರು.
ಆ ನಂತರ ಅವರು ಸೀಮಿತ ಓವರ್ ಪಂದ್ಯವನ್ನು ಆಡಲಿಲ್ಲ. ಓಜಾ 2015ರಲ್ಲಿ ಭಾರತದ ಶ್ರೀಲಂಕಾ ಪ್ರವಾಸದ ವೇಳೆ ಮೊದಲ ಬಾರಿ ಟೆಸ್ಟ್ ಕ್ಯಾಪ್ ಧರಿಸಿದ್ದರು. ಓಜಾ ಅವರು ಗಾಯಗೊಂಡಿದ್ದ ವೃದ್ದಿಮಾನ್ ಸಹಾ ಬದಲಿಗೆ ಆಡುವ ಬಳಗವನ್ನು ಸೇರಿಕೊಂಡಿದ್ದರು. 2 ಇನಿಂಗ್ಸ್ ನಲ್ಲಿ 21 ಹಾಗೂ 35 ರನ್ ಗಳಿಸಿದ್ದರು. ಓಜಾ ಏಕೈಕ ಟೆಸ್ಟ್ ಪಂದ್ಯ ಆಡಲು ಶಕ್ತರಾಗಿದ್ದರು.
ಓಜಾ ಅಂತರ್ ರಾಷ್ಟ್ರೀಯ ಕ್ರಿಕೆಟ್ ಬದುಕು ಕಡಿಮೆ ಅವಧಿಯದ್ದಾಗಿದ್ದರೂ ದೇಶಿಯ ಕ್ರಿಕೆಟ್ ನಲ್ಲಿ ತನ್ನದೇ ಛಾಪು ಮೂಡಿಸಿದ್ದರು. ರಣಜಿ ಟ್ರೋಫಿಯಲ್ಲಿ 7,861 ರನ್ ಗಳಿಸಿದ್ದರು. ತನ್ನ ರಾಜ್ಯ ತಂಡ ಮಧ್ಯಪ್ರದೇಶದ ಪರ ರಣಜಿ ಟೂರ್ನಿಯಲ್ಲಿ 8ನೇ ಗರಿಷ್ಟ ಸ್ಕೋರ್ ಗಳಿಸಿದ್ದರು. ರಣಜಿ ಟ್ರೋಫಿಯಲ್ಲಿ ವಿಕೆಟ್ ಕೀಪರ್ ಆಗಿ 351 ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿದ್ದರು. ಇದು ರಣಜಿ ಇತಿಹಾಸದಲ್ಲಿ ಉತ್ತಮ ಸಾಧನೆಯಾಗಿದೆ.
ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಸಹಿತ ಹಲವು ತಂಡಗಳನ್ನು ಪ್ರತಿನಿಧಿಸಿದ್ದರು. ಹೈದರಾಬಾದ್ ತಂಡಕ್ಕೆ ಸೇರುವ ಮೊದಲು ರಾಜಸ್ಥಾನ ರಾಯಲ್ಸ್ ಹಾಗೂ ದಿಲ್ಲಿ ಕ್ಯಾಪಿಟಲ್ಸ್ ತಂಡದಲ್ಲೂ ಆಡಿದ್ದರು.







