ಚುನಾವಣೆಗಳ ಬಂದಾಗ ಮಾತ್ರ ಪ್ರಧಾನಿ ಮೋದಿ ಹೊರಬರುತ್ತಾರೆ: ರಾಮಲಿಂಗಾರೆಡ್ಡಿ ಆಕ್ರೋಶ
ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು, ಫೆ. 15: ‘ಪ್ರಧಾನಿ ನರೇಂದ್ರ ಮೋದಿ ಅವರು ಜನರು ಸಂಕಷ್ಟದಲ್ಲಿದ್ದಾಗ ಮನೆ ಬಿಟ್ಟು ಹೊರಬರುವುದಿಲ್ಲ. ಚುನಾವಣೆ ಬರುತ್ತಿದ್ದಂತೆ ಪ್ರಚಾರಕ್ಕಾಗಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಾರೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಇಂದಿಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಸೋಮವಾರ ಇಲ್ಲಿನ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಟ್ರ್ಯಾನರಿ ರಸ್ತೆಯಲ್ಲಿನ ಪೆರಿಯಾರ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
‘ದೇಶದ ಜನತೆ ಮಹಾಮಾರಿ ಕೊರೋನ ವೈರಸ್ ಸೋಂಕಿನ ಸಂಕಷ್ಟ ಮತ್ತು ಲಾಕ್‍ಡೌನ್ ವೇಳೆಯಲ್ಲಿ ಪ್ರಧಾನಿ ಮೋದಿ ಆರು ತಿಂಗಳು ಮನೆ ಬಿಟ್ಟು ಹೊರಗೆ ಬರಲಿಲ್ಲ. ಆದರೆ, ಎಐಸಿಸಿ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸಿಗರು ಜನರ ನಡುವೆ ಇದ್ದು ನೆರವು ನೀಡಿದ್ದೆವು' ಎಂದು ರಾಮಲಿಂಗಾರೆಡ್ಡಿ ಸ್ಮರಿಸಿದರು.
‘ರಾಜ್ಯದಲ್ಲಿ ತೀವ್ರ ಸ್ವರೂಪದ ಪ್ರವಾಹ ಬಂದಾಗಲೂ ಪ್ರಧಾನಿ ಮೋದಿ ಜನರ ಕಷ್ಟವನ್ನು ನೋಡಲು ಬರಲಿಲ್ಲ. ಇದೀಗ ಪಶ್ಚಿಮ ಬಂಗಾಲ, ತಮಿಳುನಾಡು ಮತ್ತು ಕೇರಳ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಚುನಾವಣೆ ಬಂದರೆ ಮಾತ್ರ ಮೋದಿ ಹೊರಗೆ ಬರುತ್ತಾರೆ' ಎಂದು ರಾಮಲಿಂಗಾರೆಡ್ಡಿ ಲೇವಡಿ ಮಾಡಿದರು.
‘ರಾಜ್ಯದಿಂದ ಆಯ್ಕೆಯಾಗಿರುವ 25 ಮಂದಿ ಸಂಸದರು ಪ್ರಧಾನಿ ಮುಂದೆ ನಿಂತು ಮಾತನಾಡುವ, ರಾಜ್ಯದ ಸಮಸ್ಯೆಗಳನ್ನು ಹೇಳುವ, ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ನೆರವು ತರುವ ಧೈರ್ಯವಿಲ್ಲ. ರಾಜ್ಯದ ಜನರ ಕಷ್ಟಗಳನ್ನು ಕೇಳುವವರಿಲ್ಲ' ಎಂದು ರಾಮಲಿಂಗಾರೆಡ್ಡಿ ದೂರಿದರು.
‘ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಅತ್ಯಂತ ಕಡಿಮೆ ಇದ್ದರೂ ದೇಶದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಯಾವುದೇ ನಿಯಂತ್ರಣವಿಲ್ಲದೆ ಮಿತಿ ಮೀರಿದ್ದು, ಜನರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರಕಾರ ಜನರ ಬಗ್ಗೆ ಕನಿಷ್ಟ ಕಳಕಳಿ ಇದ್ದರೆ ಕೂಡಲೇ ಬೆಲೆ ಇಳಿಕೆ ಮಾಡಬೇಕು' ಎಂದು ಅವರು ಆಗ್ರಹಿಸಿದರು.
ನಾವು ಅಖಂಡ ಪರವಾಗಿದ್ದೇವೆ
‘ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ನಾವು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪರವಾಗಿದ್ದೇವೆ. ಅವರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡುತ್ತೇನೆ. ತಪ್ಪು ಮಾಡಿದ್ದರೆ ಸಂಪತ್ ರಾಜ್ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ'
-ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ







