ಮಲ್ಲಿಗೆಗೆ ನೇರ ಮಾರುಕಟ್ಟೆ ಸಿದ್ಧ: ರಾಮಕೃಷ್ಣ ಶರ್ಮ

ಕೋಟೇಶ್ವರ, ಫೆ.15: ಅಧಿಕ ಲಾಭ ನೀಡುವ ಮಲ್ಲಿಗೆ ಕೃಷಿಗೆ ವ್ಯವಸ್ಥಿತವಾದ ಮಾರುಕಟ್ಟೆ ಇಲ್ಲದೆ ಮಲ್ಲಿಗೆ ಬೆಳೆಗಾರರು ಶೋಷಣೆಗೆ ಒಳಗಾಗಿ ನಷ್ಟ ಹೊಂದುತ್ತಿದ್ದಾರೆ. ಕಡಿಮೆ ವೆಚ್ಚದಲ್ಲಿ ವೈಜ್ಞಾನಿಕವಾಗಿ ಮಲ್ಲಿಗೆ ಬೆಳೆಯುವ ಮಾಹಿತಿ-ಮಾರ್ಗದರ್ಶನದ ಜೊತೆಗೆ ಉಡುಪಿ ಜಿಲ್ಲಾ ಕೃಷಿಕ ಸಂಘವು ನೇರ ಮಾರುಕಟ್ಟೆ ವ್ಯವಸ್ಥೆ, ಬಾಳೆ ಹಗ್ಗ ತಯಾರಿ, ಹೂವನ್ನು ಕಟ್ಟುವ ಕ್ರಮಗಳ ಕುರಿತು ಸಹ ತರಬೇತಿ ನೀಡಲಿದೆ ಎಂದು ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದ್ದಾರೆ.
ಜಿಲ್ಲಾ ಕೃಷಿಕ ಸಂಘದ ಕುಂದಾಪುರ ವಲಯ ಸಮಿತಿ ಮೇಲ್‌ಕಟ್ಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಆಯೋಜಿಸಿದ್ದ ವೈಜ್ಞಾನಿಕ ಮಲ್ಲಿಗೆ ಕೃಷಿ ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾುತಿದ್ದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸುಮಿತ್ರ ಉದ್ಘಾಟಿಸಿದ ಈ ಕಾರ್ಯಕ್ರಮ ಹಿರಿಯ ಕೃಷಿಕ ಸಿದ್ಧಯ್ಯ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಸಾಧನಶೀಲ ರಾಷ್ಟ್ರೀಯ ಕೃಷಿಕ ಪ್ರಶಸ್ತಿ ವಿಜೇತ ಕುದಿ ಶ್ರೀನಿವಾಸ ಭಟ್ ಮಲ್ಲಿಗೆ ಕೃಷಿ ನಾಟಿ, ಕೀಟ-ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಸಂಘಟನೆ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿಕ ಸಂಘ ಕುಂದಾಪುರ ವಲಯ ಸಮಿತಿ ಅಧ್ಯಕ್ಷ ರೋನಾಲ್ಡ್ ಡಿಸೋಜಾ ಆನಗಳ್ಳಿ, ಉಪಾಧ್ಯಕ್ಷ ಚಂದ್ರ ಪೂಜಾರಿ, ಕಾರ್ಯಕ್ರಮ ಸಂಯೋಜಕ ರಮೇಶ್ ಪೂಜಾರಿ ಹುಣ್ಸೆಮಕ್ಕಿ, ಲಲಿತಾ ಶೆಟ್ಟಿ, ಶಶಿಕಲಾ, ಸುರೇಖಾ ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕ ಚಂದ್ರ ಅತಿಥಿಗಳನ್ನು ಸ್ವಾಗತಿಸಿದರೆ, ಮಾಲತಿ ಶೆಟ್ಟಿ ವಂದಿಸಿದರು. ಶಿಕ್ಷಕ ಗಣೇಶ್ ಶೆಟ್ಟಿ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.







