ಮಕ್ಕಳಿಗೆ ಕ್ರಿಯಾತ್ಮಕ ಟುವಟಿಕೆಗಳೊಂದಿಗೆ ಬೋಧನೆ ಮಾಡಿ: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸಲಹೆ
ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಿಗೆ ಪ್ರೇರಣಾ ಕಾರ್ಯಾಗಾರ

ಉಡುಪಿ, ಫೆ.15: ಜ್ಞಾನವೆಂಬುದು ಹರಿಯುವ ನೀರಾಗಿದ್ದು, ಶಿಕ್ಷಕರು ಓದುವ ಹವ್ಯಾಸ ಬೆಳೆಸಿಕೊಳ್ಳುವುದರೊಂದಿಗೆ ಹೆಚ್ಚು ಜ್ಞಾನ ಹೊಂದಿ ಮಕ್ಕಳಿಗೆ ಕ್ರಿಯಾತ್ಮಕ ಚಟುವಟಿಕೆ ಗಳೊಂದಿಗೆ ಬೋಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಸೋಮವಾರ ನಗರದ ಕುಂಜಿಬೆಟ್ಟಿನ ಟಿ.ಎ.ಪೈ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಆಯೋಜಿಸಿದ ಪ್ರೇರಣಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಇಂದು ಪ್ರಪಂಚ ಹತ್ತು ವರ್ಷಕ್ಕೊಮ್ಮೆ ಬದಲಾಗುತ್ತಿದೆ. ವಾತಾವರಣ, ಹವಾಮಾನ, ಜೀವನಶೈಲಿಯಲ್ಲಿ ಇದನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ವಿದ್ಯಾರ್ಥಿಗಳಿಗೆ ಮುಂದಿನ ಇಪ್ಪತ್ತು ವರ್ಷದ ಜ್ಞಾನಾಧಾರಿತ ಶಿಕ್ಷಣವನ್ನು ನೀಡಬೇಕು. ಆಗ ಮಾತ್ರ ಶಿಕ್ಷಣದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.
ಸಂವಿಧಾನ ನಮಗೆ ಮೂಲಭೂತ ಕರ್ತವ್ಯಗಳನ್ನು ಕೊಟ್ಟಿದೆ. ಆ ಕರ್ತವ್ಯದಲ್ಲಿ ಶ್ರೇಷ್ಠತೆ ಇದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಶಿಸ್ತುಬದ್ಧ ಶಿಕ್ಷಣದ ಜೊತೆಗೆ ಶಾಲೆಯ ಪರಿಸರ ಕೂಡ ಅಷ್ಟೇ ಸ್ವಚ್ಛಂಧವಾಗಿರಬೇಕು. ಈ ತರಹದ ಅಭಿವೃದ್ಧಿಗೆ ಜಿಲ್ಲೆಯಲ್ಲಿ ಯಾವುದೇ ಕೊರತೆ ಇಲ್ಲ. ಸಿಎಸ್‌ಆರ್ ಫಂಡ್ ನೀಡಲು ಜಿಲ್ಲೆಯಲ್ಲಿ ಸುಮಾರು ಕಾರ್ಪೋರೇಟ್ ಸಂಸ್ಥೆಗಳಿವೆ. ಅವುಗಳ ನೆರವು ಪಡೆಯಬಹುದು ಎಂದರು.
ಮುಖ್ಯಸ್ಥರ ವಿರುದ್ಧ ಕ್ರಮ: ಶಾಲೆಗಳಲ್ಲಿ ಅಶಿಸ್ತಿನ ವಾತಾವರಣ ಕಂಡುಬಂದಲ್ಲಿ ಅಂತಹ ಶಾಲಾ ಮುಖ್ಯಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಜಿಲ್ಲೆಯಲ್ಲಿ ಒಟ್ಟು 261 ಪ್ರೌಢಶಾಲೆಗಳಿದ್ದು, ಇದರಲ್ಲಿ 106 ಸರಕಾರಿ ಪ್ರೌಢಶಾಲೆಗಳು, 70 ಅನುದಾನಿತ ಹಾಗೂ 85 ಅನುದಾನ ರಹಿತ ಪ್ರೌಢಶಾಲೆಗಳು. ಒಟ್ಟು 13,558 ಎಸೆಸೆಲ್ಸಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಓದುತ್ತಿದ್ದು, ವಿದ್ಯಾಭ್ಯಾಸಕ್ಕೆ ಯಾವುದೇ ಅಡೆ-ತಡೆಯಾಗದಂತೆ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರೊಂದಿಗೆ ಉತ್ತಮ ಜ್ಞಾನಾಧರಿತ ಶಿಕ್ಷಣ ನೀಡುವುದರೊಂದಿಗೆ ಜಿಲ್ಲೆಗೆ ಹೆಸರು ತರುವಂತಾಗಬೇಕು ಎಂದರು.
ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಭವಿಷ್ಯ ಶಿಕ್ಷಕರ ಮೇಲಿರುತ್ತದೆ. ಮಕ್ಕಳ ಶಿಕ್ಷಣದ ಕೊರತೆ ಹಾಗೂ ಮನಸ್ಥಿತಿ ಅರಿತು ಬೋಧನೆ ಮಾಡಬೇಕು. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಶಾಲಾ ಶಿಕ್ಷಕರು ಪೂರಕ ವಾತಾವರಣವನ್ನು ಕಲ್ಪಿಸುವುದರೊಂದಿಗೆ ಉತ್ತಮ ಶಿಕ್ಷಣವನ್ನು ನೀಡಬೇಕೆಂದು ಹೇಳಿದರು. ಹಿರಿಯ ಉಪನ್ಯಾಸಕ ಹರಿಪ್ರಸಾದ್ ಮಾತನಾಡಿ, ಮಕ್ಕಳಿಗೆ ಪಾಠ ಮಾಡುವ ಮೊದಲು ಅವರ ಮನಸ್ಸನ್ನು ಏಕಾಗ್ರತೆಗೆ ಒಳಪಡಿಸಬೇಕು. ಮಕ್ಕಳು ಅರ್ಥವಾಗದ ವಿಷಯದಲ್ಲಿ ಗೊಂದಲಕ್ಕೆ ಒಳಗಾಗುತ್ತಾರೆ. ಅವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ದಿನದ ಕಾರ್ಯ ಚಟುವಟಿಕೆ ಮತ್ತು ವೇಳಾಪಟ್ಟಿಯನ್ನು ಸುಲಭವಾಗಿ ರೂಪಿಸಿಕೊಳ್ಳಬೇಕು ಎಂದು ಸೂಚಿಸಿದರು.
ವಿವಿಧ ಮನೋಭಾವದ ಕಲಿಕಾರ್ಥಿಗಳಿರುತ್ತಾರೆ. ನೋಡಿ ಕಲಿಯುವವರು, ಕೇಳಿ ಕಲಿಯುವವರು, ಖಿನ್ನತೆಗೆ ಒಳಗಾದವರು, ಕೌಟುಂಬಿಕ ಸಮಸ್ಯೆಯಲ್ಲಿನ ವಿದ್ಯಾರ್ಥಿಗಳು. ಅಂತಹ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಬೇಕು ಮತ್ತು ಆತ್ಮ ಗೌರವ ಹೆಚ್ಚಿಸಿದರೆ ಮಾತ್ರ ಕಲಿಕೆಗೆ ಅರ್ಥ ನೀಡಿದಂತೆ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ಸಿಟಿಇಯ ಪ್ರಾಂಶುಪಾಲ ಸಿಪ್ರಿಯಾನ್ ಮೆಂತೆರೋ, ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ, ವಿವಿಧ ತಾಲೂಕು ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಹೆಚ್ ನಾಗೂರ ಸ್ವಾಗತಿಸಿದರು. ಉಡುಪಿ ಡಯಟ್‌ನ ಉಪಪ್ರಾಂಶುಪಾಲ ಅಶೋಕ ಕಾಮತ್ ವಂದಿಸಿದರು. ಡಿವೈಪಿಸಿ ಪ್ರಭಾಕರ ವಿುತ್ಯಂತ ಕಾಯಕ್ರಮ ನಿರೂಪಿಸಿದರು.







