ಸಾಮಾಜಿಕ ಹೋರಾಟಗಾರ್ತಿ ನವದೀಪ್ ಕೌರ್ ಗೆ ಎರಡನೇ ಪ್ರಕರಣದಲ್ಲಿ ಜಾಮೀನು
ಮೂರನೇ ಪ್ರಕರಣದ ಜಾಮೀನಿಗಾಗಿ ಮನವಿ

ಚಂಡಿಗಢ: ಕಳೆದ ಒಂದು ತಿಂಗಳಿನಿಂದ ಹರ್ಯಾಣದ ಜೈಲಿನಲ್ಲಿರುವ ಪಂಜಾಬ್ ನ ದಲಿತ ಕಾರ್ಮಿಕರು ಹಾಗೂ ಕಾರ್ಮಿಕ ಸಂಘಟನೆಗಳ ಹೋರಾಟಗಾರ್ತಿ 23ರ ಹರೆಯದ ನವದೀಪ್ ಕೌರ್ ತನ್ನ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣಕ್ಕೆ ಇಂದು ಜಾಮೀನು ಪಡದಿದ್ದಾರೆ.
ಸಾಮಾಜಿಕ ಹೋರಾಟಗಾರ್ತಿ ಕೌರ್ ಮತ್ತೊಂದು ಪ್ರಕರಣದಲ್ಲಿ ಕಳೆದ ವಾರ ಜಾಮೀನು ಪಡೆದಿದ್ದರು. ಮೂರನೇ ಪ್ರಕರಣಕ್ಕೂ ಜಾಮೀನು ನೀಡುವಂತೆ ಕೋರಿ ಇಂದು ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕೌರ್ ಅವರ ಮನವಿಯ ಕುರಿತು ನ್ಯಾಯಾಲಯ ನಿರ್ಧರಿಸುವ ತನಕ ಜೈಲಿನಲ್ಲಿ ಉಳಿಯಬೇಕಾಗಿದೆ.
ಕೌರ್ ಅವರು ಎಫ್ ಐ ಆರ್ ನಂ.26 ಹಾಗೂ 649ಕ್ಕೆ ಜಾಮೀನು ಪಡೆದಿದ್ದಾರೆ. ಎಫ್ ಐಆರ್ ನಂ.25ಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಎಫ್ ಐಆರ್ ನಲ್ಲಿ ಕೌರ್ ವಿರುದ್ಧ ಹತ್ಯೆ ಯತ್ನ ಕೇಸ್ ದಾಖಲಿಸಲಾಗಿದೆ. ಹರ್ಯಾಣ ಹಾಗೂ ಪಂಜಾಬ್ ಹೈಕೋರ್ಟ್ ಮೂರನೇ ಪ್ರಕರಣ ಕುರಿತ ವಿಚಾರಣೆ ವಾರದ ಬಳಿಕ ನಡೆಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಜನವರಿ 12ರಂದು ಹರ್ಯಾಣದ ಕುಂಡ್ಲಿಯಲ್ಲಿ ಕಾರ್ಮಿಕರ ಹೋರಾಟದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಕೌರ್ ಅವರನ್ನು ಬಂಧಿಸಲಾಗಿತ್ತು. ಕೌರ್ ವಿರುದ್ಧ ಕೊಲೆ ಯತ್ನ, ಸುಲಿಗೆ, ಕಳ್ಳತನ, ಗಲಭೆ, ಕಾನೂನುಬಾಹಿರ ಸಭೆ ಹಾಗೂ ಕ್ರಿಮಿನಲ್ ಬೆದರಿಕೆ ಮುಂತಾದ ಸೆಕ್ಷನ್ ಗಳಡಿಯಲ್ಲಿ ಆರೋಪ ಹೊರಿಸಲಾಗಿದೆ.
ಕೌರ್ ಬಂಧನಕ್ಕೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಟೀಕೆ ವ್ಯಕ್ತವಾಗಿದ್ದು, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಹೋದರ ಸೊಸೆ ಮೀನಾ ಹ್ಯಾರಿಸ್ ಸೇರಿದಂತೆ ಹಲವು ವ್ಯಕ್ತಿಗಳಿಂದ ಬೆಂಬಲ ವ್ಯಕ್ತವಾಗಿತ್ತು.







