ಇಂದು ಮಧ್ಯರಾತ್ರಿಯಿಂದಲೇ ‘ಫಾಸ್ಟ್ಯಾಗ್’ ಜಾರಿ: ಮಂಗಳೂರಿನಲ್ಲಿ ಟೋಲ್ಗೇಟ್ಗೆ ಹೆಚ್ಚುವರಿ ಪೊಲೀಸ್ ಭದ್ರತೆ

File Photo
ಮಂಗಳೂರು, ಫೆ.15: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಝಾ ಮೂಲಕ ಹಾದುಹೋಗುವ ವಾಹನಗಳಿಗೆ ಇಲೆಕ್ಟ್ರಾನಿಕ್ ರೂಪದಲ್ಲಿ ಸುಂಕ ಪಾವತಿಸುವ ‘ಫಾಸ್ಟ್ಯಾಗ್’ ವ್ಯವಸ್ಥೆ ಸೋಮವಾರ ಮಧ್ಯರಾತ್ರಿಯಿಂದ ದೇಶಾದ್ಯಂತ ಕಡ್ಡಾಯವಾಗಿ ಜಾರಿಯಾಗಲಿದ್ದು, ಮಂಗಳೂರಿನಲ್ಲೂ ಇದಕ್ಕೆ ಸಿದ್ಧತೆ ನಡೆದಿದೆ. ಆದರೆ ನೂರಾರು ವಾಹನಗಳು ಇನ್ನೂ ಫಾಸ್ಟಾಗ್ ಮಾಡಿಲ್ಲ. ಸೋಮವಾರ ತಲಪಾಡಿ ಟೋಲ್ಗೇಟ್ನ ಕ್ಯಾಶ್ಲೇನ್ನಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು ಕಂಡುಬಂತು.
ಟೋಲ್ಗೇಟ್ಗಳಲ್ಲಿ ಇದುವರೆಗೆ ಫಾಸ್ಟ್ಯಾಗ್ ಲೇನ್ ಜತೆಗೆ ಕ್ಯಾಶ್ ಲೇನ್ಗಳೂ ಇದ್ದವು. ಇದೀಗ ಫಾಸ್ಟ್ಯಾಗ್ ಕಡ್ಡಾಯ ಹಿನ್ನೆಲೆಯಲ್ಲಿ ಈವರೆಗೆ ಇದ್ದ ಕ್ಯಾಶ್ ಲೇನ್ನ್ನು ತೆರವುಗೊಳಿಸಲಾಗುತ್ತದೆ.
ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ನಿಗದಿತ ಸುಂಕದ ದುಪ್ಪಟ್ಟು ಸುಂಕ ವಿಧಿಸಲಾಗುತ್ತದೆ ಎಂದು ಟೋಲ್ಗೇಟ್ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನು ತಪ್ಪಿಸಲು ಟೋಲ್ಗೇಟ್ ಬಳಿಯಲ್ಲೇ ಫಾಸ್ಟ್ಯಾಗ್ ಮಾಡಿಕೊಡಲು ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ತಲಪಾಡಿಯಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದೆ.
ಹೊಸ ನಿಯಮ ಜಾರಿಯಿಂದ ವಾಹನ ಚಾಲಕರು ಮತ್ತು ಟೋಲ್ಗೇಟ್ ಸಿಬ್ಬಂದಿ ನಡುವೆ ಚಕಮಕಿ, ಘರ್ಷಣೆ ನಡೆಯಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯಿಂದಲೇ ಟೋಲ್ಗೇಟ್ಗೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.







