ನ್ಯಾಯಾಲಯದಲ್ಲಿ ತನ್ನ ವಿರುದ್ಧದ ಪ್ರಕರಣವನ್ನು ತಾನೇ ವಾದಿಸಿದ ದಿಶಾ ರವಿ

ಹೊಸದಿಲ್ಲಿ, ಫೆ. 15: ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಟ್ವೀಟ್ ಮಾಡಿದ ‘ಟೂಲ್‌ಕಿಟ್’ ಕುರಿತಂತೆ ಬೆಂಗಳೂರಿನಿಂದ ಸಾಮಾಜಿಕ ಹೋರಾಟಗಾರ್ತಿ 22 ವರ್ಷದ ದಿಶಾ ರವಿ ಅವರನ್ನು ಬಂಧಿಸಿರುವುದು ಕೇವಲ ಆಕ್ರೋಶದ ಅಲೆಗಳನ್ನು ಮಾತ್ರ ಹುಟ್ಟಿ ಹಾಕಿಲ್ಲ. ಬದಲಾಗಿ, ಕಾನೂನು ಪ್ರಕ್ರಿಯೆ ಕುರಿತ ಪ್ರಶ್ನೆಗಳನ್ನು ಕೂಡ ಎತ್ತಿದೆ. ರವಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಂದರ್ಭ ದಿಶಾ ರವಿ ಅವರ ಪರ ವಕೀಲರು ಇರಲಿಲ್ಲ ಹಾಗೂ ಅವರನ್ನು ನ್ಯಾಯಾಲಯ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು. ದಿಶಾ ರವಿ ಅವರನ್ನು ಬೆಂಗಳೂರಿನ ಅವರ ನಿವಾಸದಿಂದ ಶನಿವಾರ ಅಪರಾಹ್ನ ಬಂಧಿಸಲಾಗಿತ್ತು. ಅನಂತರ ದಿಲ್ಲಿಗೆ ತರೆ ತರಲಾಗಿತ್ತು. ಅವರ ವಿರುದ್ಧ ದೇಶದ್ರೋಹ ಹಾಗೂ ಪಿತೂರಿಯ ಆರೋಪ ಹೊರಿಸಲಾಗಿತ್ತು.
ನ್ಯಾಯಾಲಯ ನ್ಯಾಯವಾದಿಯನ್ನು ಒದಗಿಸಿದ ಹೊರತಾಗಿಯೂ ದಿಶಾ ರವಿ ಅವರು ತನ್ನ ಪ್ರಕರಣವನ್ನು ತಾವೇ ವಾದಿಸಿದ್ದಾರೆ ಎಂದು ದಿಶಾ ರವಿ ಅವರ ನ್ಯಾಯಾವಾದಿಗಳ ತಂಡ ಹೇಳಿದೆ.
ದಿಶಾ ರವಿ ಅವರನ್ನು ದಿಲ್ಲಿ ಪೊಲೀಸರು ಬೆಂಗಳೂರಿನಿಂದ ಕರೆದೊಯ್ಯುವಾಗ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂಬ ಬಗ್ಗೆ ಕೂಡ ಈಗ ಪ್ರಶ್ನೆ ಹುಟ್ಟಿಕೊಂಡಿದೆ. ‘‘ನ್ಯಾಯಾಂಗ ಕರ್ತವ್ಯವನ್ನು ಉಲ್ಲಂಘಿಸಿರುವುದು ಆಘಾತಕಾರಿ’’ ಎಂದು ನ್ಯಾಯವಾದಿ ರೆಬೆಕ್ಕಾ ಜೋನ್ ಪೋಸ್ಟ್ ಒಂದರಲ್ಲಿ ಹೇಳಿದ್ದಾರೆ. ದಿಶಾ ರವಿ ಅವರ ಪರ ನ್ಯಾಯವಾದಿ ಇರುವ ಬಗ್ಗೆ ಖಾತರಿಪಡಿಸುವಲ್ಲಿ ದಿಲ್ಲಿಯ ಪಾಟಿಯಾಲ ಹೌಸ್ ನ್ಯಾಯಾಲಯದ ದಂಡಾಧಿಕಾರಿ ವಿಫಲರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
‘‘ದಿಶಾ ರವಿ ಅವರನ್ನು ಪ್ರತಿನಿಧಿಸುವ ನ್ಯಾಯವಾದಿ ಇದ್ದಾರೆಯೇ ಎಂಬುದನ್ನು ಮೊದಲು ಖಾತರಿ ಮಾಡಿಕೊಳ್ಳದೆ ಹದಿಹರೆಯದ ಯುವತಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ ಕರ್ತವ್ಯ ನಿರತ ದಂಡಾಧಿಕಾರಿ ಅವರ ನಡವಳಿಕೆ ಬಗ್ಗೆ ಬೇಸರವಾಗಿದೆ’’ ಎಂದು ರೆಬೆಕ್ಕಾ ಜೋನ್ ಹೇಳಿದ್ದಾರೆ.
ಪ್ರಕರಣದ ವಿಚಾರಣೆಯ ವೇಳೆ ಆರೋಪಿಯನ್ನು ಪ್ರತಿನಿಧಿಸುವ ನ್ಯಾಯವಾದಿ ಇಲ್ಲದೇ ಇದ್ದ ಸಂದರ್ಭ ದಂಡಾಧಿಕಾರಿ ನ್ಯಾಯವಾದಿ ಬರುವ ವರೆಗೆ ಕಾಯಬೇಕು. ಇಲ್ಲವೇ, ಪರ್ಯಾಯವಾಗಿ ನ್ಯಾಯವಾದಿಯನ್ನು ಒದಗಿಸಬೇಕು ಎಂದು ರೆಬೆಕ್ಕಾ ಜೋನ್ ಹೇಳಿದ್ದಾರೆ.







