ಅಮಾಸೆಬೈಲು ಅರಣ್ಯಾಧಿಕಾರಿಗಳಿಂದ ದೌರ್ಜನ್ಯ ಆರೋಪ: ಬಂಧಿತರ ಬಿಡುಗಡೆಗೆ ಆಗ್ರಹಿಸಿ ಧರಣಿ

ಕುಂದಾಪುರ, ಫೆ.15: ಏರ್‌ಗನ್ ಸಾಗಾಟದ ಆರೋಪದಲ್ಲಿ ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಅಮಾಸೆಬೈಲು ವನ್ಯಜೀವಿ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಅಮಾಸೆಬೈಲು ಪೇಟೆಯಿಂದ ಅರಣ್ಯಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಗ್ರಾಮಸ್ಥರು, ನೊಂದ ಬಡ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಧರಣಿ ನಡೆಸಿದರು. ಈ ಕುರಿತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಸೂಕ್ತ ಕ್ರಮ ತೆಗೆುಕೊಳ್ಳುವ ಭರವಸೆ ನೀಡಿದರು.
ಅಮಾಸೆಬೈಲಿನ ಗೋಳಿಕಾಡು ನಿವಾಸಿ ಮಾಲತಿ ನಾಯ್ಕ್ ಎಂಬವರ ಮಗ ನಟರಾಜ ನಾಯ್ಕ್ ಮತ್ತು ಸ್ಥಳೀಯ ಆನಂದ ಶೆಟ್ಟಿ ಎಂಬವರು ಏರ್‌ಗನ್ ಹಿಡಿದುಕೊಂಡು ರಾತ್ರಿ ಬೈಕ್ನಲ್ಲಿ ಹೋಗುತ್ತಿದ್ದಾರೆಂಬ ಆರೋಪದಲ್ಲಿ ವನ್ಯ ಜೀವಿ ಅಮಾಸೆಬೈಲು ವಲಯ ಅರಣ್ಯಾಧಿಕಾರಿಯವರ ತಂಡ ಇಬ್ಬರನ್ನು ಬಂಧಿಸಿ, ಏರ್‌ಗನ್ ಮತ್ತು ಬೈಕ್‌ನ್ನು ವಶಕ್ಕೆ ಪಡೆದುಕೊಂಡಿತು.
‘ನನ್ನ ಮಗ ಯಾವುದೇ ಮಾರಾಕಾಸ್ತ್ರ ಹೊಂದಿರಲಿಲ್ಲ. ಯಾವುದೇ ಕಾನೂನು ವಿರೋಧಿ ಕೃತ್ಯ ಮಾಡಿರಲಿಲ್ಲ. ಆದರೆ ಆತನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಲಾಗಿದೆ. ನಟರಾಜ ಮತ್ತು ಸ್ಥಳೀಯ ಆನಂದ ಶೆಟ್ಟಿ ಅವರನ್ನು ಬಿಡುಗಡೆಗೊಳಿಸಬೇಕು’ ಎಂದು ಬಂಧಿತ ನಟರಾಜನ ತಾಯಿ ಮಾಲತಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಚಂದ್ರ ಶೆಟ್ಟಿ ಕೆಲಾ, ಜಯಪ್ರಕಾಶ್ ಶೆಟ್ಟಿ, ಶಂಕರ್ ಪೂಜಾರಿ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಿಠ್ಠಲ ಶೆಟ್ಟಿ, ಮುಖಂಡರಾದ ಸದಾನಂದ ಶೆಟ್ಟಿ ರಟ್ಟಾಡಿ, ಸದಾಶಿವ ಶೆಟ್ಟಿ ಜಡ್ಡಿನಗದ್ದೆ, ರಾಮಣ್ಣ ಹೆಗ್ಡೆ, ಸೂರ್ಯನಾರಾಯಣ ಐತಾಳ್, ನವೀನ್‌ಚಂದ್ರ ಶೆಟ್ಟಿ ಅಮಾಸೆಬೈಲು, ಕೇಶವ ಆಚಾರ್ಯ ಕೆಲಾ, ಸುಧೀರ್ ಕುಮಾರ್, ವಿಕ್ರಮ್ ಶೆಟ್ಟಿ ಹೊಳೆಬಾಗಿಲು, ಬಾಲಕೃಷ್ಣ ಶೆಟ್ಟಿಗಾರ ಬೆಳ್ಮನೆ, ಕರುಣಾಕರ್ ಶೆಟ್ಟಿಗಾರ್ ಬೆಳ್ಮನೆ, ಕಾಳು ನಾಯ್ಕ ಮೊದಲಾದವರು ಹಾಜರಿದ್ದರು.







