ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಅಭಿವೃದ್ಧಿ ಅಕಾಡೆಮಿ ಸ್ಥಾಪನೆ: ಅರವಿಂದ ಲಿಂಬಾವಳಿ

ಬೆಂಗಳೂರು, ಫೆ.15: ಲಂಬಾಣಿ ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಯನ್ನು ಸಂರಕ್ಷಿಸಿ ಪ್ರಚುರಪಡಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ, ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಅಭಿವೃದ್ಧಿ ಅಕಾಡೆಮಿಯನ್ನು ಸ್ಥಾಪನೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಕಾಡೆಮಿಯ ಸ್ಥಾಪನೆ ಸಂಬಂಧ ಇದೆ ಫೆ.2 ರಂದು ಆದೇಶ ಹೊರಡಿಸಲಾಗಿದೆ ಎಂದರು.
ಬೆಂಗಳೂರಿನ ತಾಂಡ ಅಭಿವೃದ್ಧಿ ನಿಗಮದ ಕಟ್ಟಡದಲ್ಲಿ ಈ ಅಕಾಡೆಮಿಯ ಪ್ರಧಾನ ಕಚೇರಿಯನ್ನು ಸ್ಥಾಪಿಸಲು ತಾತ್ಕಾಲಿಕವಾಗಿ ಏರ್ಪಾಡು ಮಾಡಲಾಗಿದೆ. ಇದರ ಶಾಖೆಯನ್ನು ಕೊಪ್ಪಳದ ಬಹದ್ದೂರ್ ಬಂಡೆಯಲ್ಲಿ ಇರುವ ಬಂಜಾರ ಭವನದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು
ಈ ಆದೇಶದಲ್ಲಿ ರಿಜಿಸ್ಟ್ರಾರ್ ಮತ್ತು ಒಂದು ಡಿ.ಟಿ.ಪಿ. ಆಪರೇಟರ್, ಒಂದು ಪ್ರಥಮ ದರ್ಜೆ ಸಹಾಯಕರು ಮತ್ತು ಒಂದು ದಲಾಯಿತ ಹುದ್ದೆಗಳನ್ನು ಸೃಜನೆ ಮಾಡಲು ಅನುಮೋದನೆ ನೀಡಲಾಗಿದೆ. ಮುಂಬರುವ ಆಯವ್ಯಯದಲ್ಲಿ ಇತರ ಭಾಷಾ ಅಕಾಡೆಮಿಗಳಿಗೆ ನೀಡಿದಂತೆ ಈ ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಅಭಿವೃದ್ಧಿ ಅಕಾಡೆಮಿಗೆ ಅನುದಾನವನ್ನು ಒದಗಿಸಲಾಗುವುದು. ಶೀಘ್ರದಲ್ಲೇ ಈ ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲಾಗುತ್ತದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.
ಲಂಬಾಣಿ ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರಕಾರಕ್ಕೆ ಈಗಾಗಲೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಂಜಾರ ಭವನ ನಿರ್ಮಾಣ ಮಾಡಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಅರವಿಂದ ಲಿಂಬಾವಳಿ ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಶಾಸಕ ಪಿ.ರಾಜೀವ್, ಸಂಸದ ಡಾ.ಉಮೇಶ್ ಜಾಧವ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







