ರಾಹುಲ್ ಗಾಂಧಿ ಜೊತೆ ಮಾತುಕತೆಗಾಗಿ ಮಂಗಳವಾರ ಹೊಸದಿಲ್ಲಿಗೆ ತೆರಳಲಿರುವ ಸಿದ್ದರಾಮಯ್ಯ

ಬೆಂಗಳೂರು, ಫೆ.15: ವಿರೋಧ ಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಂಗಳವಾರ ಬೆಳಗ್ಗೆ ಹೊಸದಿಲ್ಲಿಗೆ ತೆರಳಲಿದ್ದು, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಲಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೆಳಗ್ಗೆ 9.45ಕ್ಕೆ ಹೊಸದಿಲ್ಲಿಗೆ ಪ್ರಯಾಣ ಬೆಳೆಸಲಿರುವ ಸಿದ್ದರಾಮಯ್ಯ, ಸಂಜೆ 4 ಗಂಟೆಗೆ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ರಾತ್ರಿ ಹೊಸದಿಲ್ಲಿಯಲ್ಲೆ ವಾಸ್ತವ್ಯ ಹೂಡಲಿರುವ ಸಿದ್ದರಾಮಯ್ಯ, ಬುಧವಾರ ಮಧ್ಯಾಹ್ನ 2.10ಕ್ಕೆ ಹೊಸದಿಲ್ಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರಕಾರಗಳು ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ಹಾಗೂ ಭೂ ಸುಧಾರಣಾ ಕಾಯ್ದೆಗಳ ವಿರುದ್ಧ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆದಿರುವ ಹೋರಾಟಗಳು, ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಬೇಕಿರುವ ಕಾರ್ಯತಂತ್ರಗಳ ಕುರಿತು ಸಿದ್ದರಾಮಯ್ಯ, ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ, ಮುಂಬರುವ ಮಸ್ಕಿ, ಸಿಂಧಗಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕುರಿತು ಸಿದ್ದರಾಮಯ್ಯ, ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಹಾಗೂ ತಮ್ಮ ಬೆಂಬಲಿಗರಾದ ರಾಮಲಿಂಗಾರೆಡ್ಡಿ ಮತ್ತು ಆರ್.ಧ್ರುವನಾರಾಯಣ್‍ರನ್ನು ಕೆಪಿಸಿಸಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದರಿಂದ ಇದೇ ವೇಳೆ ಹೈಕಮಾಂಡ್‍ಗೆ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಲಿದ್ದಾರೆ.







