ಬೆಂಗಳೂರು ಎಸ್ಸೆಸ್ಸೆಫ್ ವತಿಯಿಂದ ಡಿವಿಷನ್ ಕಾರ್ಯಕಾರಿ ಸಮಿತಿ ಸದಸ್ಯರಿಗೆ 'ಬಿದಾಯ' ಶಿಬಿರ

ಬೆಂಗಳೂರು: ಎಸ್ಸೆಸ್ಸೆಫ್‌ನ ಕಾರ್ಯಕರ್ತರು ಆತ್ಮ ಶುದ್ದಿಯೊಂದಿಗೆ, ಅಧಿಕಾರ ಮೋಹವಿಲ್ಲದೆ ಕಾರ್ಯಾಚರಿಸಬೇಕು. ಸಂಘಟನೆಯಲ್ಲಿ ಲಭಿಸುವ ವಿವಿಧ ಜವಾಬ್ದಾರಿಗಳನ್ನು ಅಲ್ಲಾಹನು ಧರ್ಮ ಸೇವೆ ಮಾಡಲು ನಮಗೆ ನೀಡುವ ಸೌಭಾಗ್ಯವಾಗಿದೆ ಎಂದು ಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷ ಹಬೀಬ್ ನೂರಾನಿ ಹೇಳಿದರು.
ನಗರದಲ್ಲಿ ಡಿವಿಷನ್ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ಶಿಬಿರ 'ಬಿದಾಯ2021'ಲ್ಲಿ ಮುಖ್ಯಪ್ರಭಾಷಣ ಮಾಡಿದ ಅವರು, ಸಂಘಟನೆಗೆ ಮಹೋನ್ನತ ವ್ಯಕ್ತಿಗಳು ನೇತೃತ್ವವನ್ನು ನೀಡಿದ್ದು, ಅವರು ವಹಿಸಿದ ಹುದ್ದೆಯಲ್ಲಿ ನಾವಿರುವಾಗ ಆ ಹುದ್ದೆಗೆ ಚ್ಯುತಿ ಬರದ ರೀತಿಯಲ್ಲಿ ಕಾರ್ಯಚರಿಸಬೇಕು. ಸಂಘಟನೆಯಲ್ಲಿ ಮೇಲ್ಘಟಕಕ್ಕೆ ಹೋದಂತೆ ಆರಾಧನೆಗಳನ್ನು ಅಧಿಕ ಗೊಳಿಸುವ ಮೂಲಕ ಅಲ್ಲಾಹನಿಗೂ ಹತ್ತಿರವಾಗಬೇಕು. ಸಂಘಟನಾ ಚಟುವಟಿಕೆಗಳಿಗಾಗಿ ದಿನನಿತ್ಯದ ಆರಾಧನೆಗಳನ್ನು ಕಡಿತಗೊಳಿಸವವರಾಗಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಪಾಧ್ಯಕ್ಷ ಸ್ವಾದಿಕ್ ಸಖಾಫಿ, ಶಿಬಿರದ ಮಹತ್ವವನ್ನು ವಿವರಿಸಿದರು. ಮುನ್ನುಡಿ ಭಾಷಣ ಮಾಡಿದ ಶಿಹಾಬ್ ಮಡಿವಾಳ ಜಿಲ್ಲಾ ಸಮಿತಿ ಆಯೋಜಿಸುವ ಕ್ಯಾಂಪ್ ಬಗ್ಗೆ ಮಾಹಿತಿ ನೀಡಿದರು.
ಪರಿಚಯ ಸೆಸನ್ ಗೆ ನೇತೃತ್ವ ನೀಡಿದ ರಾಜ್ಯ ನಾಯಕ ಶಾಫಿ ಸಅದಿ, ಕಾರ್ಯಕರ್ತರು ವೈಯಕ್ತಿಕವಾಗಿಯೂ ಕೌಟುಂಬಿಕವಾಗಿಯೂ ಪರಸ್ಪರ ಅರಿತಿರಬೇಕಾದ ಮಹತ್ವದ ಕುರಿತು ತಿಳಿಸಿದರು. ಜಿಲ್ಲಾ ಪ್ರ.ಕಾರ್ಯದರ್ಶಿ ಅಖ್ತರ್ ಹುಸೈನ್ ಸ್ವಾಗತಿಸಿ, ಕಾರ್ಯದರ್ಶಿ ಅಲ್ತಾಫ್ ಅಲಿ ವಂದಿಸಿದರು.








