ಮ್ಯಾಪಿಂಗ್ ನೀತಿ:ತೊಡಕುಗಳನ್ನು ನಿವಾರಿಸಲು ನಿಯಮಗಳ ಸಡಿಲಿಕೆ
ಹೊಸದಿಲ್ಲಿ,ಫೆ.15: ಸರ್ವೆ ಮತ್ತು ನಕಾಶೆ ರಚನೆ ಸೇರಿದಂತೆ ಭೂಪ್ರಾದೇಶಿಕ ದತ್ತಾಂಶಗಳು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ತನ್ನ ಮ್ಯಾಪಿಂಗ್ ನೀತಿಯನ್ನು ಉದಾರಗೊಳಿಸುವ ಮೂಲಕ ಸರಕಾರವು ಅದರಲ್ಲಿದ್ದ ತೊಡಕುಗಳನ್ನು ನಿವಾರಿಸಿದೆ. ಇನ್ನು ಮುಂದೆ ಇದಕ್ಕಾಗಿ ದೇಶದ ಖಾಸಗಿ ಸಂಸ್ಥೆಗಳು ಪೂರ್ವಾನುಮತಿಯನ್ನು ಪಡೆಯಬೇಕಿಲ್ಲ.
ದೂರ ಸಂವೇದಿ ಡಾಟಾಗಳನ್ನು ಪಡೆಯಲು ಬಾಹ್ಯಾಕಾಶ ಇಲಾಖೆಯು ತನ್ನ ಬಾಹ್ಯಾಕಾಶ ಆಧಾರಿತ ದೂರ ಸಂವೇದಿ ನೀತಿಯನ್ನು ಉದಾರಗೊಳಿಸಿರುವ ಬೆನ್ನಿಗೇ ಹೊರಬಿದ್ದಿರುವ ನೂತನ ಮ್ಯಾಪಿಂಗ್ ನೀತಿಯಿಂದ ವಿವಿಧ ಕ್ಷೇತ್ರಗಳಿಗೆ ಅನುಕೂಲವಾಗಲಿದೆ. ನೀತಿಯ ಪರಿಷ್ಕರಣೆಯು ಆತ್ಮನಿರ್ಭರ ಭಾರತ ಮತ್ತು ಐದು ಲಕ್ಷ ಕೋಟಿ ಆರ್ಥಿಕತೆಯ ಗುರಿಗಳನ್ನು ಸಾಧಿಸಲು ನೆರವಾಗಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ತಿಳಿಸಿದೆ.
ಸಂಸ್ಥೆಗಳಿಗೆ ಈಗ ಭೂಪ್ರಾದೇಶಿಕ ತಂತ್ರಜ್ಞಾನಗಳನ್ನು ಬಳಸಿ ನೀರಿನೊಳಗೆ ಸೇರಿದಂತೆ ಭಾರತೀಯ ಭೂಪ್ರದೇಶದಲ್ಲಿ ನಕಾಶೆಗಳು ಸೇರಿದಂತೆ ಭೂಪ್ರಾದೇಶಿಕ ಡಾಟಾಗಳನ್ನು ಪಡೆದುಕೊಳ್ಳಲು,ಸಂಗ್ರಹಿಸಲು,ಸೃಷ್ಟಿಸಲು,ಹಂಚಿಕೊಳ್ಳಲು ಮತ್ತು ವಿತರಿಸಲು ಸಾಧ್ಯವಾಗಲಿದೆ.
ಮ್ಯಾಪಿಂಗ್ ಮತ್ತು ದೂರ ಸಂವೇದಿ ಡಾಟಾ ನೀತಿಗಳಲ್ಲಿ ಉದಾರೀಕರಣವು ಸ್ಟಾರ್ಟ್‌ಅಪ್‌ಗಳು ಮತ್ತು ಖಾಸಗಿ ಕ್ಷೇತ್ರಕ್ಕೆ ವಿಫುಲ ಅವಕಾಶಗಳನ್ನು ತೆರೆಯುವ ಜೊತೆಗೆ ಭಾರತೀಯ ರೈತರಿಗೂ ಇದರ ಲಾಭ ದೊರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟಿಸಿದ್ದಾರೆ.







