ಇಲಾಖೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾದರೆ ಸಹಿಸಲು ಸಾಧ್ಯವಿಲ್ಲ: ಅಧಿಕಾರಿಗಳಿಗೆ ಸಚಿವ ಎಸ್.ಅಂಗಾರ ಸೂಚನೆ
ಪ್ರಗತಿ ಪರಿಶೀಲನೆ ಸಭೆ

ಸುಳ್ಯ: ಎಲ್ಲ ಇಲಾಖೆಯ ಅಧಿಕಾರಿಗಳು ಜನರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕು. ಸರಕಾರದ ಯೋಜನೆಗಳು ಜನರಿಗೆ ತಲುಪಬೇಕು. ಇಲಾಖೆಗಳಲ್ಲಿ ಕೆಲಸಗಳಾಗುತ್ತಿಲ್ಲ ಎಂದು ಜನರಿಂದ ದೂರುಗಳು ಬಂದರೆ ನಾವು ಸುಮ್ಮನಿರುವುದಿಲ್ಲ ಎಂದು ಸಚಿವ ಎಸ್.ಅಂಗಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸುಳ್ಯ ತಾ.ಪಂ. ನಲ್ಲಿ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಪಿಡಬ್ಲ್ಯೂಡಿ, ಜಿ.ಪಂ. ಇಂಜಿನಿಯರಿಂಗ್, ಕುಡಿಯುವ ನೀರು ಇಲಾಖೆಯ ಇಂಜಿನಿಯರ್ ರಿಂದ ಮಾಹಿತಿ ಪಡೆದು ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಿ. ಯಾವುದೇ ದೂರುಗಳು ಸಾರ್ವಜನಿಕರಿಂದ ಬರಬಾರದು ಮತ್ತು ಅನುದಾನ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಿ ಎಂದು ಹೇಳಿದರು.
ಮೆಸ್ಕಾಂ ಇಲಾಖೆಯವರು ತಮ್ಮ ಬೇಡಿಕೆಯ ಪಟ್ಟಿ ಸಿದ್ಧಪಡಿಸಿಕೊಂಡು ನಮಗೆ ನೀಡಬೇಕು. ಮುಂದಿನ 10-15 ದಿನದಲ್ಲಿ 110 ಕೆ.ವಿ. ಸಂಬಂಧಿಸಿದಂತೆ ಮುಖ್ಯಮಂತ್ರಿ ಗಳ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ನಮ್ಮ ಬೇಡಿಕೆಯನ್ನು ಅಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತೇವೆ. ಕೆ.ಪಿ.ಟಿ.ಸಿ.ಎಲ್., ಅರಣ್ಯ, ಮೆಸ್ಕಾಂ ಇಲಾಖೆಯವರು ಈ ಸಭೆಯಲ್ಲಿರುತ್ತಾರೆ ಎಂದು ಸಚಿವರು ಮಾಹಿತಿ ನೀಡಿದರು.
ಸುಳ್ಯ ಸಿ.ಡಿ.ಪಿ.ಒ. ಕಚೇರಿಯ ಹೊಸ ವಾಹನದ ಬೇಡಿಕೆಯ ನ್ನು ಸಿ.ಡಿ.ಪಿ.ಒ. ರಶ್ಮಿ ಅಶೋಕ್ ಮಂಡಿಸಿದರು. ಅಂಗನವಾಡಿ ಫೆ. 20 ರಿಂದ ಆರಂಭಕ್ಕೆ ಅನುಮತಿ ದೊರೆತಿದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರ ವರೆಗೆ ತೆರೆಯಲಿದ್ದು, ಅಲ್ಲಿ ಆಹಾರ ಕೊಡುವ ವ್ಯವಸ್ಥೆ ಮುಂದಿನ ಆದೇಶದವರೆಗೆ ಇರುವುದಿಲ್ಲ ಎಂದು ಹೇಳಿದರು. ಶಾಲೆಗಳಲ್ಲಿ ಅಕ್ಷರದಾಸೋಹ ಯೋಜನೆ ಆರಂಭಿಸುವಂತೆ ಪೋಷಕರಿಂದ ಬೇಡಿಕೆ ಇರುವ ಬಗ್ಗೆ ಸುಳ್ಯ ಬಿ.ಇ.ಒ. ಕಚೇರಿ ಸಿಬ್ಬಂದಿ ಸಭೆಗೆ ಮಾಹಿತಿ ನೀಡಿದರು.
ಕೊಲ್ಲಮೊಗ್ರದಲ್ಲಿ ಮಳೆಹಾನಿಗೊಳಗಾದ 9 ಕುಟುಂಬಕ್ಕೆ ಇನ್ನೂ ನಿವೇಶನ ಆಗದಿರುವ ಬಗ್ಗೆ ವಸತಿ ನೋಡೆಲ್ ಸಂತೋಷ್ ಮಾಹಿತಿ ನೀಡಿದರು. ಭಾಗಶಃ ಅರಣ್ಯ ಎಂದಿರುವುದರಿಂದ ಅಲ್ಲಿ ಜಾಗ ನೀಡಲು ಸಮಸ್ಯೆ ಆಗುವ ಕುರಿತು ರೇಂಜರ್ ರಾಘವೇಂದ್ರ ಮಾಹಿತಿ ನೀಡಿದರು.
ಈ ಕುರಿತು ಚರ್ಚೆ ನಡೆದು ಭಾಗಶಃ ಅರಣ್ಯ ಆರ್ ಟಿ ಸಿ ಯಲ್ಲಿ ದಾಖಲಾದ ಕುರಿತು ಮೂಲ ದಾಖಲೆ ನೀಡುವಂತೆ ತಹಸೀಲ್ದಾರ್ ರಿಗೆ ಸೂಚನೆ ನೀಡಿದರು.
ಕೆ.ಎಸ್. ಆರ್.ಟಿ.ಸಿ. ಸಂಬಂಧಿಸಿದಂತೆ ಹಿಂದಿನ ರೂಟ್ ಮುಂದುವರಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸಚಿವರು ಹೇಳಿದರು.
ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ತಹಸೀಲ್ದಾರ್ ಅನಿತಾಲಕ್ಷ್ಮೀ, ಇ.ಒ. ಭವಾನಿಶಂಕರ್ ಹಾಗೂ ಅಧಿಕಾರಿಗಳು ಇದ್ದರು.







