ಬೆಳಾಲು ಗ್ರಾ.ಪಂ. ನಲ್ಲಿ ಮೀಸಲಾತಿಯ ಬಲದಲ್ಲಿ ಕಾಂಗ್ರಸ್ ಗೆ ಅಧ್ಯಕ್ಷ ಸ್ಥಾನ
ಬೆಳ್ತಂಗಡಿ: ಬೆಳಾಲು ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೀಸಲಾತಿಯ ಬಲದಲ್ಲಿ ಕಾಂಗ್ರಸ್ ಗೆ ಅಧ್ಯಕ್ಷ ಸ್ಥಾನ ಒಲಿದರೆ ಚೀಟಿ ಎತ್ತುವ ಮೂಲಕ ಬಿಜೆಪಿಗೆ ಉಪಾಧ್ಯಕ್ಷ ಸ್ಥಾನ ಒಲಿದು ಬಂದಿದೆ. ಬೆಳಾಲು ಗ್ರಾ,ಪಂ.ನಲ್ಲಿ ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು 6 ಹಾಗೂ ಕಾಂಗ್ರೆಸ್ ಬೆಂಬಲಿತರು 6 ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಸಮಬಲ ಸಾಧಿಸಿದೆ.
ಇಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಾಗ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಬೆಳಾಲು 1ನೇ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾದ ಜಯಂತಿರವರು ಹಿಂದುಳಿದ ವರ್ಗ ಎ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾಗಿ ಬೆಳಾಲು 4ನೇ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾದ ಮಾಜಿ ಗ್ರಾ.ಪಂ ಸದಸ್ಯ ಸತೀಶ್ ಎಳ್ಳುಗದ್ದೆ ನಾಮಪತ್ರ ಸಲ್ಲಿಸಿದ್ದು, ಇವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಬೆಂಬಲಿತರಾಗಿ ಬೆಳಾಲು 3ನೇ ವಾರ್ಡಿನಿಂದ ಚುನಾಯಿತರಾದ ಪ್ರವೀಣ್ ವಿಜಯ್ ನಾಮಪತ್ರ ಸಲ್ಲಿಸಿದರು.
ಚುನಾವಣಾಧಿಕಾರಿ ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಅಗ್ನೇಸ್ ರವರು ಚುನಾವಣಾ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ, ಉಪಾಧ್ಯಕ್ಷ ಸ್ಥಾನಕ್ಕೆ 2 ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣೆಯನ್ನು ನಡೆಸಿದರು.
ಚುನಾವಣೆಯಲ್ಲಿ ಮತ ಎಣಿಕೆ ನಡೆದು ಇಬ್ಬರೂ ತಲಾ ಆರು ಮತಗಳನ್ನು ಪಡೆದರು. ಅಂತಿಮವಾಗಿ ಚೀಟಿ ಎತ್ತುವ ಪ್ರಕ್ರಿಯೆ ನಡೆದು ಅದರಲ್ಲಿ ಸತೀಶ್ ಎಳ್ಳುಗದ್ದೆಯವರು ಆಯ್ಕೆಯಾಗುವ ಮೂಲಕ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾರೂ ಪ್ರತಿಸ್ಪರ್ಧಿ ಇರದ ಕಾರಣ ಈಗಾಗಲೇ ನಾಮಪತ್ರ ಸಲ್ಲಿಸಿದ್ದ ಜಯಂತಿರವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ದೀಪಕ್‌ರಾಜ್ ನೂತನ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಸಹಕರಿಸಿದರು.







