ಬಹುಮತ ಕಳೆದುಕೊಂಡ ಪುದುಚ್ಚೇರಿ ಕಾಂಗ್ರೆಸ್ ಸರಕಾರ

ವಿ ನಾರಾಯಣಸ್ವಾಮಿ
ಹೊಸದಿಲ್ಲಿ: ಪುದುಚ್ಚೇರಿಯಲ್ಲಿ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿವೆಯೆನ್ನುವಾಗ ಅಲ್ಲಿನ ಕಾಂಗ್ರೆಸ್ ಸರಕಾರ ತನ್ನ ಅಲ್ಪ ಬಹುಮತವನ್ನು ಕಳೆದುಕೊಂಡು ಅಲ್ಪಮತದ ಸರಕಾರವಾಗಿ ಬಿಟ್ಟಿದೆ. ಸೋಮವಾರ ಒಬ್ಬ ಶಾಸಕ ರಾಜೀನಾಮೆ ನೀಡಿದ್ದರೆ ಇಂದು ಒಬ್ಬರು ರಾಜೀನಾಮೆ ನೀಡಿದ್ದಾರೆ. ಜನವರಿಯಲ್ಲಿ ಶಾಸಕರಾದ ಎ ನಮಸ್ಸಿವಾಯಂ ಹಾಗೂ ಇ ತೀಪ್ಪೈಂಜನ್ ರಾಜೀನಾಮೆ ನೀಡಿದ್ದರು.
ಪುದುಚ್ಚೇರಿ ವಿಧಾನಸಭೆಯ ಒಟ್ಟು 30 ಚುನಾಯಿತ ಶಾಸಕರ ಪೈಕಿ 15 ಮಂದಿ ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ಡಿಎಂಕೆಯ ಒಬ್ಬ ಸದಸ್ಯ ಹಾಗೂ ಒಬ್ಬ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಅಲ್ಪ ಬಹುಮತದ ಸರಕಾರವನ್ನು ಕಾಂಗ್ರೆಸ್ ನಡೆಸುತ್ತಿತ್ತು.
ಆದರೆ ಈಗ ನಾಲ್ಕು ಶಾಸಕರ ರಾಜೀನಾಮೆಯೊಂದಿಗೆ ಕಾಂಗ್ರೆಸ್ ಪಕ್ಷದ ಬಳಿ 11 ಶಾಸಕರು ಮಾತ್ರವಿದ್ದು ವಿ ನಾರಾಯಣಸ್ವಾಮಿ ನೇತೃತ್ವದ ಸರಕಾರ ಬಹುಮತ ಕಳೆದುಕೊಂಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಪುದುಚ್ಚೆರಿಗೆ ಭೇಟಿ ನೀಡಿ ಪಕ್ಷದ ಚುನಾವಣಾ ತಂತ್ರಗಾರಿಕೆ ಕುರಿತು ಚರ್ಚಿಸಲಿದ್ದಾರೆನ್ನುವಾಗ ಈ ಬೆಳವಣಿಗೆ ನಡೆದಿದೆ.
ಪುದುಚ್ಚೇರಿಯಲ್ಲಿ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಪುದುಚ್ಚೇರಿ ವಿಧಾನಸಭೆಯಲ್ಲಿ ಎಐಎಡಿಎಂಕೆಯ ನಾಲ್ಕು ಶಾಸಕರು, ಎಐಎನ್ಆರ್ಸಿಯ ಏಳು ಮಂದಿ ಚುನಾಯಿತ ಶಾಸಕರು ಹಾಗೂ ಬಿಜೆಪಿಯ ಮೂವರು ನಾಮನಿರ್ದೇಶಿತ ಸದಸ್ಯರಿದ್ದಾರೆ.







