ಫಾಸ್ಟ್ಯಾಗ್ ಕಡ್ಡಾಯ: ಸಾಸ್ತಾನ ಟೋಲ್ ಗೇಟ್ ವಿರುದ್ಧ ಸ್ಥಳೀಯರ ಪ್ರತಿಭಟನೆ

ಕೋಟ, ಫೆ.15: ಫಾಸ್ಟ್ಯಾಗ್ ಕಡ್ಡಾಯಗೊಳಿಸಿದ ಕೇಂದ್ರ ಸರಕಾರದ ಆದೇಶದಂತೆ ಇಂದು ಬೆಳಗ್ಗಿನಿಂದ ರಾಷ್ಟ್ರೀಯ ಹೆದ್ದಾರಿಯ ಸಾಸ್ತಾನದಲ್ಲಿರುವ ಟೋಲ್ ಗೇಟಿನಲ್ಲಿ ಸ್ಥಳೀಯರಿಗೂ ಶುಲ್ಕ ವಿಧಿಸುತ್ತಿರುವುದನ್ನು ವಿರೋಧಿಸಿ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಸ್ಥಳೀಯರು ಟೋಲ್ ಗೇಟಿನ ಮುಂಭಾಗದಲ್ಲಿ ತಮ್ಮ ವಾಹನಗಳನ್ನು ರಸ್ತೆಗೆ ಅಡ್ಡವಿಟ್ಟು ಧರಣಿ ಕುಳಿತು ನವಯುಗ್ ಕಂಪನಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಶ್ಯಾಮ ಸುಂದರ್ ಮಾತನಾಡಿ, ಇಂದಿನಿಂದ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸ್ಥಳೀಯರು ಸಾಸ್ತಾನ ಟೋಲ್ ಗೇಟಿಗೆ ಹಿಂದಿನಂತೆ ತಮ್ಮ ವಾಹನಗಳಿಗೆ ಯಾವುದೇ ಟೋಲ್ ನೀಡದೆ ಕರ ನಿರಾಕರಣೆ ಚಳವಳಿ ಮುಂದಾಗಬೇಕು ಎಂದು ಕರೆ ನೀಡಿದರು.
ಹೆದ್ದಾರಿ ಹೋರಾಟ ಸಮಿತಿಯ ಸ್ಥಾಪಕ ಅಧ್ಯಕ್ಷ ಪ್ರತಾಪ್ ಶೆಟ್ಟಿ ಮಾತನಾಡಿ, ಸ್ಥಳೀಯರಿಗೆ ಟೋಲ್ ನಿಂದ ವಿನಾಯಿತಿ ನೀಡುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದರು.
ಉಡುಪಿ ಡಿವೈಎಸ್ಪಿ ಸುಧಾಕರ್ ಎಸ್., ಬ್ರಹ್ಮಾವರ ವೃತ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಕೋಟ ಎಸ್ಸೈ ಸಂತೋಷ್ ಬಿ.ಪಿ. ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಇದಕ್ಕೆ ಪ್ರತಿಭಟನಾಕಾರರು ಮಣಿಯಲಿಲ್ಲ. ಬಳಿಕ ಸ್ಥಳಕ್ಕಾಗಮಿಸಿದ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ ಈ ಬಗ್ಗೆ ಸೂಕ್ತ ಕ್ರಮಕ್ಕೆ ಸಮಯಾವಕಾಶ ಕೋರಿದರು. ಅದಕ್ಕೆ ಸಮ್ಮತಿಸಿದ ಪ್ರತಿಭಟನಾಕಾರರ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯ ಮುಂಚೂಣಿಯಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಜ್ಯೋತಿ ಉದಯ ಪೂಜಾರಿ, ಅಚ್ಯುತ ಪೂಜಾರಿ ಕಾರ್ಕಡ, ಬೋಜ ಪೂಜಾರಿ ಕೋಟ, ದಯಾನಂದ ಶಾನಭಾಗ್, ಶ್ರೀಕಾಂತ್ ಶೈಣೆ ಕೋಟ, ವಿಠ್ಠಲ್ ಪೈ ಸಾಲಿಗ್ರಾಮ, ಪ್ರಶಾಂತ್ ಶೆಟ್ಟಿ, ಡೇನಿಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.






.gif)
.gif)
.gif)
.gif)
.gif)
.gif)
.gif)

