ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ: ಡಬ್ಲ್ಯುಟಿಎ ರ್ಯಾಂಕಿಂಗ್ ನಲ್ಲಿ 2ನೇ ಸ್ಥಾನಕ್ಕೇರಿದ ಭಾರತ

ಚೆನ್ನೈ: ಇಂಗ್ಲೆಂಡ್ ವಿರುದ್ಧ ಮಂಗಳವಾರ ಕೊನೆಗೊಂಡಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 317 ರನ್ ಗಳಿಂದ ಭರ್ಜರಿ ಜಯ ದಾಖಲಿಸಿದ ಭಾರತವು ಐಸಿಸಿ ಬಿಡುಗಡೆ ಮಾಡಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‍ನಲ್ಲಿ (ಡಬ್ಲ್ಯುಟಿಎ)ಎರಡನೇ ಸ್ಥಾನಕ್ಕೇರಿದೆ.
ಚಿಪಾಕ್ ನಲ್ಲಿ ಜಯ ಸಾಧಿಸಿ 4 ಪಂದ್ಯಗಳ ಸರಣಿಯಲ್ಲಿ 1-1 ಅಂತರದಿಂದ ಸಮಬಲಗೊಳಿಸಿರುವ ಭಾರತ 69.7 ಶೇಕಡಾ ಅಂಕಗಳನ್ನು ಗಳಿಸಿದ್ದು 460 ಸರಾಸರಿ ಅಂಕಗಳನ್ನು ಗಳಿಸಿದೆ. ಈಗಾಗಲೇ ಡಬ್ಲ್ಯುಟಿಎ ಫೈನಲ್‍ಗೆ ಅರ್ಹತೆ ಪಡೆದಿರುವ ನ್ಯೂಝಿಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಡಬ್ಲ್ಯುಟಿಎ ಫೈನಲ್ ಜೂನ್ ನಲ್ಲಿ ಇಂಗ್ಲೆಂಡ್ ನ ಲಾಡ್ರ್ಸ್‍ನಲ್ಲಿ ನಡೆಯಲಿದೆ.
ನ್ಯೂಝಿಲ್ಯಾಂಡ್ 70 ಪಿಸಿಟಿ ಹೊಂದಿದ್ದು, 420 ಅಂಕ ಹೊಂದಿದೆ.
ಭಾರತವು ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 227 ರನ್ ಗಳಿಂದ ಸೋತಿತ್ತು. ಇದೀಗ ಗೆಲುವಿನ ಹಳಿಗೆ ಬಂದಿರುವ ಭಾರತವು ಸರಣಿಯಲ್ಲಿ ಇನ್ನೊಂದು ಪಂದ್ಯದಲ್ಲಿ ಜಯ ಸಾಧಿಸಿದರೆ ಅಥವಾ ಡ್ರಾ ಸಾಧಿಸಿದರೆ ಡಬ್ಲ್ಯುಟಿಎ ಫೈನಲ್ ಗೆ ತಲುಪಲಿದೆ.
ಭಾರತವು ಇಂದಿನ ಫಲಿತಾಂಶಕ್ಕಿಂತ ಮೊದಲು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿತ್ತು. ಕೊಹ್ಲಿ ಪಡೆ ಈಗ ಡಬ್ಲ್ಯುಟಿಎ ಸರ್ಕಲ್‍ನಲ್ಲಿ ಆರನೇ ಸರಣಿಯನ್ನು ಆಡುತ್ತಿದ್ದು, 10 ಪಂದ್ಯದಲ್ಲಿ ಜಯ, 4ರಲ್ಲಿ ಸೋಲು ಹಾಗೂ ಒಂದರಲ್ಲಿ ಡ್ರಾ ಸಾಧಿಸಿದೆ.
ಡಬ್ಲ್ಯುಟಿಎ ರ್ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯ ಮೂರನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 4ನೇ ಸ್ಥಾನದಲ್ಲಿದೆ.
ಭಾರತ-ಇಂಗ್ಲೆಂಡ್ ನಡುವೆ 3ನೇ ಟೆಸ್ಟ್ ಪಂದ್ಯವು ಫೆ.24ರಂದು ಅಹ್ಮದಾಬಾದ್ ನಲ್ಲಿ ನಡೆಯಲಿದೆ.







