ಮುಂಬೈಯಲ್ಲಿ ಮತ್ತೊಮ್ಮೆ ಲಾಕ್ ಡೌನ್ ಸಾಧ್ಯತೆ: ಈ ಬಗ್ಗೆ ಮೇಯರ್ ಏನು ಹೇಳುತ್ತಾರೆ?
ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ಮುಂಬೈ: ಮುಂಬೈ ಮಹಾನಗರದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಳವಾಗುತ್ತಿದ್ದು, ಮಹಾನಗರದಲ್ಲಿ ಮತ್ತೊಮ್ಮೆ ಲಾಕ್ ಡೌನ್ ವಿಧಿಸುವ ಸಾಧ್ಯತೆಯಿದೆ ಎಂದು ಮುಂಬೈನ ಉನ್ನತ ಅಧಿಕಾರಿಯೊಬ್ಬರು ಇಂದು ಹೇಳಿದ್ದಾರೆ. ಆದರೆ, ನಗರವು ಮತ್ತೊಮ್ಮೆ ಲಾಕ್ ಡೌನ್ ಒಳಗಾಗುವುದು ಜನರನ್ನು ಅವಲಂಬಿತವಾಗಿದೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ.
ರೈಲುಗಳಲ್ಲಿ ಪ್ರಯಾಣಿಸುವ ಹೆಚ್ಚಿನ ಜನರು ಮಾಸ್ಕ್ ಗಳನ್ನು ಧರಿಸುತ್ತಿಲ್ಲ. ಇದು ಚಿಂತಿಸುವ ವಿಚಾರ. ಜನರು ಮುನ್ನಚ್ಚರಿಕೆ ವಹಿಸಬೇಕು ಇಲ್ಲವೇ ಮತ್ತೊಂದು ಲಾಕ್ ಡೌನ್ ಗೆ ಸಿದ್ದವಾಗಿರಬೇಕು. ಮತ್ತೊಮ್ಮೆ ಲಾಕ್ ಡೌನ್ ಅನುಷ್ಠಾನ ಜನರ ಕೈಯಲ್ಲಿ ಇದೆ ಎಂದು ಕಿಶೋರಿ ಹೇಳಿದ್ದಾರೆ.
ಕಠಿಣ ನಿರ್ಧಾರವನ್ನು ಕೈಗೊಳ್ಳಲಿದ್ದು, ಜನರು ಇದಕ್ಕೆ ತಯಾರಿರಲೇಬೇಕು. ನಿರ್ದಿಷ್ಟ ನಿರ್ಧಾರಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳದೇ ಇದ್ದರೆ ಬಳಿಕ ಇದಕ್ಕೆ ನಾವು ಭಾರೀ ಬೆಲೆ ತೆರಬೇಕಾಗಬಹುದು ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್ ಎರಡನೇ ಅಲೆ ಬಂದ ಬಳಿಕ ವಿಶ್ವದ ಹೆಚ್ಚಿನ ಭಾಗಗಳಲ್ಲಿ ಮತ್ತೊಮ್ಮೆ ಲಾಕ್ ಡೌನ್ ವಿಧಿಸಿದ್ದನ್ನು ನಾವು ನೋಡಿದ್ದೇವೆ. ಜನರು ಮುಂಜಾಗ್ರತೆ ವಹಿಸಿಕೊಳ್ಳಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ವರದಿ ನಮಗಿದೆ ಎಂದು ಪವಾರ್ ಹೇಳಿದ್ದಾರೆ.
ಮುಂಬೈನಲ್ಲಿ ಸೋಮವಾರ 493 ಕೋವಿಡ್ ಕೇಸ್ ಗಳು ಪತ್ತೆಯಾಗಿದ್ದು, ಒಟ್ಟು ಕೇಸ್ 3,14,569ಕ್ಕೆ ತಲುಪಿದೆ. ಸಾವಿನ ಒಟ್ಟು ಸಂಖ್ಯೆ 11,420ಕ್ಕೆ ಏರಿಕೆಯಾಗಿದೆ.







