ಸತತ ಎಂಟನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಹೊಸದಿಲ್ಲಿ : ಸತತ ಎಂಟನೇ ದಿನವಾದ ಮಂಗಳವಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆ ಕಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳಲ್ಲಿ ಏರಿಕೆ ಕಂಡಿರುವಂತೆ ಭಾರತದಲ್ಲಿಯೂ ತೈಲ ಬೆಲೆಗಳು ಏರುತ್ತಲೇ ಇದ್ದು ಮಂಗಳವಾರ ದಿಲ್ಲಿಯಲ್ಲಿ ಡೀಸೆಲ್ ಬೆಲೆ ಲೀಟರ್ ಗೆ 35 ಪೈಸೆಯಷ್ಟು ಏರಿಕೆಯಾಗಿದ್ದರೆ ಪೆಟ್ರೋಲ್ ಬೆಲೆ ಲೀಟರ್ ಗೆ 30 ಪೈಸೆಯಷ್ಟು ಏರಿಕೆ ಕಂಡಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ 89.29 ಆಗಿದ್ದರೆ ಡೀಸೆಲ್ ಬೆಲೆ ರೂ 79.70 ಆಗಿದೆ.
ಕಳೆದ ಏಳು ದಿನಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ 2.36ರಷ್ಟು ಏರಿಕೆ ಕಂಡಿದ್ದರೆ ಡೀಸೆಲ್ ಬೆಲೆ ರೂ 2.91ರಷ್ಟು ಏರಿಕೆ ಕಂಡಿದೆ.
ದೇಶದಾದ್ಯಂತ ಆಯಾಯ ರಾಜ್ಯ ಸರಕಾರಗಳ ತೆರಿಗೆ ಪ್ರಮಾಣದ ಅನುಸಾರ ಪೆಟ್ರೋಲ್ ದರಗಳು ಇಂದು 26ರಿಂದ 32 ಪೈಸೆಯಷ್ಟು ಹಾಗೂ ಡೀಸೆಲ್ ಬೆಲೆ 30ರಿಂದ 35 ಪೈಸೆಯಷ್ಟು ಏರಿಕೆ ಕಂಡಿದೆ.
ಮುಂಬೈಯಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿ ತಲುಪಲು ಇನ್ನು ಕೇವಲ ರೂ 4 ಮಾತ್ರ ಬಾಕಿಯಿದೆ. ಸದ್ಯ ಅಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ 95.75ರಷ್ಟಿದ್ದರೆ ಡೀಸೆಲ್ ಬೆಲೆ ರೂ 86.72ರಷ್ಟಿದೆ.
ಪ್ರೀಮಿಯಂ ಪೆಟ್ರೋಲ್ ಬೆಲೆ ರಾಜಸ್ಥಾನ ಮತ್ತು ಮಧ್ಯ ಪ್ರದೇಶದ ಹಲವು ನಗರಗಳಲ್ಲಿ ಲೀಟರ್ ಗೆ ರೂ. 100ರ ಗಡಿ ದಾಟಿದೆ.
ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‍ಗೆ 63.5 ಡಾಲರ್ ತಲುಪಿದೆ.
ಈ ವರ್ಷ ಇಲ್ಲಿಯ ತನಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 20 ಬಾರಿ ಏರಿಕೆ ಕಂಡಿದ್ದು ಈ ವರ್ಷದ ಆರಂಭದಿಂದ ಇಲ್ಲಿಯ ತನಕ ಎರಡೂ ಇಂಧನಗಳ ಬೆಲೆ ಕ್ರಮವಾಗಿ ರೂ 5.58 ಹಾಗೂ ರೂ 5.83ರಷ್ಟು ಏರಿಕೆಯಾಗಿದೆ.







