ಟೂಲ್ ಕಿಟ್ ಪ್ರಕರಣ:ಪ್ರಯಾಣ ಉದ್ದೇಶಿತ ಜಾಮೀನು ಪಡೆದ ಶಂತನು ಮುಲುಕ್

ಹೊಸದಿಲ್ಲಿ: ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರಿಂದ ವಿಚಾರಣೆ ಎದುರಿಸುತ್ತಿರುವ ಇಂಜಿನಿಯರ್ ಶಂತನು ಮುಲುಕ್ ಅವರಿಗೆ ಬಾಂಬೆ ಹೈಕೋರ್ಟ್ ಇಂದು ಪ್ರಯಾಣ ಉದ್ದೇಶಿತ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬಾಂಬೆ ಹೈಕೋರ್ಟ್ ನ ಔರಂಗಾಬಾದ್ ಪೀಠವು ವಕೀಲರ ವಾದಗಳನ್ನು ಆಲಿಸಿದ ಬಳಿಕ ಮುಲುಕ್ ಗೆ 10 ದಿನಗಳ ಪ್ರಯಾಣ ಉದ್ದೇಶಿತ ನಿರೀಕ್ಷಣಾ ಜಾಮೀನು ನೀಡಲು ನಿರ್ಧರಿಸಿತು.
ಮತ್ತೊಂದೆಡೆ ಇದೇ ಪ್ರಕರಣಕ್ಕೆ ಸಂಬಂಧಿಸಿ ವಕೀಲೆ ನಿಕಿತಾ ಜೇಕಬ್ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಆಲಿಸಿದ್ದು, ತನ್ನ ಆದೇಶವನ್ನು ಬುಧವಾರಕ್ಕೆ ಕಾಯ್ದಿರಿಸಿದೆ. ನಿಕಿತಾ ಮುಂಬೈನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಶಂತನು ಮುಲುಕ್ ಹೈಕೋರ್ಟ್ ನ ಔರಂಗಾಬಾದ್ ಪೀಠಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ದಿಲ್ಲಿ ಪೊಲೀಸರು ಟೂಲ್ ಕಿಟ್ ಪ್ರಕರಣದಲ್ಲಿ ನಿಕಿತಾ ಹಾಗೂ ಶಂತನು ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಿದ ಬಳಿಕ ಇಬ್ಬರೂ ಬಾಂಬೆ ಹೈಕೋರ್ಟ್ ಸಂಪರ್ಕಿಸಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟಿರುವ ಪರಿಸರ ಹೋರಾಟಗಾರ್ತಿ ದಿಶಾ ರವಿ ಯವರನ್ನು ವಿಚಾರಣೆ ನಡೆಸಿದಾಗ ಜೇಕಬ್ ಹಾಗೂ ಶಂತನು ಹೆಸರನ್ನು ಹೇಳಿದ್ದರು.





