ಬಿಎಸ್‌ವೈ ಕುಟುಂಬದ ವಿರುದ್ಧ ಯತ್ನಾಳ್ ಭ್ರಷ್ಟಾಚಾರ ಆರೋಪ: ಸುಪ್ರೀಂ ನ್ಯಾಯಾಧೀಶರಿಂದ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಹೊಸದಿಲ್ಲಿ, ಫೆ.16: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬ ಭ್ರಷ್ಟಾಚಾರದಲ್ಲಿ ಸಂಪಾದನೆ ಮಾಡಿದ್ದ ಹಣವನ್ನು ಮಾರಿಷಸ್ನಲ್ಲಿಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದಾರೆ. ಈ ಪ್ರಕರಣ ಕುರಿತು ತಕ್ಷಣ ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಾಧೀಶರ ಮೂಲಕ ತನಿಖೆಗೆ ಪ್ರಧಾನಿ ನರೇಂದ್ರ ಮೋದಿ ಆದೇಶಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಮಂಗಳವಾರ ಹೊಸದಿಲ್ಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಸಂದರ್ಭದಲ್ಲಿ ‘ನಾ ಖಾವುಂಗಾ, ನಾ ಖಾನೆದೂಂಗಾ’(ನಾನು ತಿನ್ನುವುದಿಲ್ಲ, ಬೇರೆಯವರಿಗೆ ತಿನ್ನಲೂ ಬಿಡುವುದಿಲ್ಲ) ಎಂದು ಭಾಷಣ ಮಾಡುತ್ತಿದ್ದರು. ಇವತ್ತು ಅವರ ಪಕ್ಷದ ಮುಖ್ಯಮಂತ್ರಿ ವಿರುದ್ಧ ಅವರದೇ ಪಕ್ಷದ ಹಿರಿಯ ಶಾಸಕರು ಬಹಿರಂಗವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಪ್ರಧಾನಿ ತಮ್ಮ ಹೇಳಿಕೆಗೆ ಬದ್ಧವಾಗಿರಲಿ. ಈ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೂಲಕ ತನಿಖೆಗೆ ಆದೇಶಿಸಲಿ ಎಂದರು.
ಕುರುಬ ಸಮುದಾಯದ ಎಸ್ಟಿ ಮೀಸಲಾತಿ ಹೋರಾಟಕ್ಕೆ ಇದು ಸೂಕ್ತ ಸಮಯವಲ್ಲ. ಕುಲಶಾಸ್ತ್ರ ಅಧ್ಯಯನ ವರದಿ ಬಂದ ನಂತರ, ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿ, ಆ ಶಿಫಾರಸ್ಸನ್ನು ಕೇಂದ್ರ ತಿರಸ್ಕರಿಸಿದರೆ ಹೋರಾಟದ ಅಗತ್ಯ ಬೀಳಲಿದೆ. ಈಗಲೇ ಹೋರಾಟ ವ್ಯರ್ಥ ಎಂದು ಸಿದ್ದರಾಮಯ್ಯ ಹೇಳಿದರು.
ಕುರುಬರ ಎಸ್ಟಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಈಶ್ವರಪ್ಪ ಬಿಜೆಪಿ ನಾಯಕ. ಮೀಸಲಾತಿಗಾಗಿ ಶಿಫಾರಸ್ಸು ಮಾಡಬೇಕಾದ, ಆ ಶಿಫಾರಸನ್ನು ಅನುಮೋದಿಸಬೇಕಾದ ಸರಕಾರಗಳು ಬಿಜೆಪಿ ಕೈಯಲ್ಲಿದೆ. ಹಾಗಾಗಿ ಇದೊಂದು ರೀತಿ ಈಶ್ವರಪ್ಪನವರ ವಿರುದ್ಧ ಈಶ್ವರಪ್ಪನೇ ಹೋರಾಟ ನಡೆಸಿದಂತೆ ಎಂದು ಅವರು ವ್ಯಂಗ್ಯವಾಡಿದರು.
ಸಂವಿಧಾನದ 15, 16 ಹಾಗೂ 340ನೇ ವಿಧಿಗಳಿಗನುಸಾರ ಅರ್ಹರಾಗಿ ಇರುವವರಿಗೆ ಮೀಸಲಾತಿ ನೀಡಲೇಬೇಕು. ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮಾತ್ರ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದವರ ಮನೆಗಳಿಗೆ ಗುರುತು ಹಾಕಲಾಗುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಮನೆಗೂ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡಿ ಎಂದು ಕೆಲವರು ಬಂದಿದ್ದರು. ಆದರೆ, ನಾನು ವಿವಾದಿತ ಸ್ಥಳದಲ್ಲಿ ನಿರ್ಮಿಸುತ್ತಿರುವ ಮಂದಿರಕ್ಕೆ ದೇಣಿಗೆ ಕೊಡಲ್ಲ. ಬೇರೆ ಕಡೆ ನಿರ್ಮಿಸಿದರೆ ನೀಡುತ್ತೇನೆ ಎಂದು ಹೇಳಿ ಕಳುಹಿಸಿದ್ದೇನೆ ಎಂದರು.
ನಮ್ಮ ಮನೆಗೆ ಬಂದವರೂ ಯಾರು ಗುರುತು ಹಾಕಿ ಹೋಗಿಲ್ಲ. ಅವರ ಮನೆಗೆ ಏನಾದರೂ ಗುರುತು ಹಾಕಿದ್ದಾರಾ ಅನ್ನೋದನ್ನು ಅವರ ಬಳಿಯೆ ಕೇಳಿ ಎಂದ ಸಿದ್ದರಾಮಯ್ಯ, ಸಾರ್ವಜನಿಕರಿಂದ ಹಣ ಸಂಗ್ರಹಿಸುವವವರು ಪಾರದರ್ಶಕವಾಗಿ ನಡೆದುಕೊಳ್ಳಬೇಕಾಗುತ್ತದೆ. ಪಿಎಂ ಕೇರ್ಸ್ ನಿಧಿಯ ಲೆಕ್ಕವನ್ನೇ ಕೊಡದಿರುವ ಈಗಿನ ಬಿಜೆಪಿ ಸರಕಾರ ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸುವ ಹಣದ ಲೆಕ್ಕ ನೀಡುತ್ತಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ ಎಂದರು.
ರಾಮಮಂದಿರ ನಿರ್ಮಾಣಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಇದೇ ಬಿಜೆಪಿ ಹಿಂದೊಮ್ಮೆ ರಾಮ ಮಂದಿರ ನಿರ್ಮಾಣಕ್ಕಾಗಿ ಇಟ್ಟಿಗೆ-ಹಣ ಸಂಗ್ರಹಿಸಿತ್ತಲ್ಲಾ, ಅದು ಏನಾಯಿತೆಂದು ಯಾರಿಗೂ ಗೊತ್ತಿಲ್ಲ. ಅದರ ಲೆಕ್ಕವನ್ನು ಬಿಜೆಪಿ ಮೊದಲು ಸಾರ್ವಜನಿಕರಿಗೆ ನೀಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಪಿಎಲ್ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ನಡೆಸಿದರೆ ತಪ್ಪಲ್ಲ. ಆದರೆ ಟಿವಿ-ಬೈಕ್‍ಗಳು ಬಡತನದ ಮಾನದಂಡಗಳಲ್ಲ. ಜನ ಸಾಲ ಮಾಡಿ ಬೈಕ್-ಟಿವಿ ಇಟ್ಕೊಂಡಿರ್ತಾರೆ, ಅವರೆಲ್ಲ ಶ್ರೀಮಂತರಾ? ಬಡವರ ಸೇವೆ ಮಾಡಲು ಮನಸ್ಸಿಲ್ಲದ ಉಮೇಶ್ ಕತ್ತಿಯಂತಹವರಿಗೆ ಮಾತ್ರ ಇಂತಹ ಅಸಂಬದ್ಧ ಯೋಚನೆಗಳು ಬರುತ್ತೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿ @BSYBJP ಅವರ ಕುಟುಂಬ ಭ್ರಷ್ಟಾಚಾರದಲ್ಲಿ ಸಂಪಾದನೆ ಮಾಡಿದ್ದ ಹಣವನ್ನು ಮಾರಿಷಸ್ನಲ್ಲಿಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದಾರೆ.
— Siddaramaiah (@siddaramaiah) February 16, 2021
ಈ ಪ್ರಕರಣ ಕುರಿತು ತಕ್ಷಣ ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಾಧೀಶರ ಮೂಲಕ ತನಿಖೆಗೆ ಪ್ರಧಾನಿ @narendramodi ಆದೇಶಿಸಬೇಕು.







