ಭಾರತದ ಮಹಾನ್ ನಾಯಕರಿಗೆ ಸೂಕ್ತ ಗೌರವ ದೊರಕಿಲ್ಲ: ಪ್ರಧಾನಿ ಮೋದಿ

ಹೊಸದಿಲ್ಲಿ,ಫೆ.16: ಸುಭಾಶ್ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಭಾರತದ ಮಹಾನ್ ನಾಯಕರಿಗೆ ಹಿಂದಿನ ಸರಕಾರಗಳು ಸೂಕ್ತ ಗೌರವವನ್ನು ನೀಡಿರಲಿಲ್ಲ ಮತ್ತು ಈ ಅನ್ಯಾಯವನ್ನು ಸರಿಪಡಿಸಲು ದೇಶವೀಗ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದರು.
ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯಲ್ಲಿ ಶ್ರಾವಸ್ತಿಯ ಪರಾಕ್ರಮಿ ರಾಜ ಸುಹೇಲದೇವ್ ಅವರ ಪ್ರತಿಮೆ ಸ್ಥಾಪನೆಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸವನ್ನು ನೆರವೇರಿಸಿದ ಮೋದಿ,ದೇಶವನ್ನು ರಕ್ಷಿಸಲು ತಮ್ಮ ಪ್ರಾಣಗಳನ್ನೇ ತ್ಯಾಗ ಮಾಡಿದ ಹಲವಾರು ಮಹಾನ್ ನಾಯಕರಿಗೆ ಅರ್ಹ ಸ್ಥಾನವನ್ನು ನೀಡಲಾಗಿಲ್ಲ. ಚರಿತ್ರೆಯನ್ನು ಬರೆದ ಜನರು ಚರಿತ್ರೆಯನ್ನು ಸೃಷ್ಟಿಸಿದವರಿಗೆ ಮಾಡಿರುವ ಅನ್ಯಾಯವನ್ನು ಸರಿಪಡಿಸಲು ನವಭಾರತವೀಗ ಪ್ರಯತ್ನಿಸುತ್ತಿದೆ ಎಂದರು.
ದೇಶವನ್ನು ಗುಲಾಮಗಿರಿಯಲ್ಲಿ ಸಿಕ್ಕಿಸಿದವರು ಬರೆದಿರುವ ಚರಿತ್ರೆಯ ಆವೃತ್ತಿ ಅದೊಂದೇ ಅಲ್ಲ. ಭಾರತದ ಜಾನಪದಗಳಲ್ಲಿಯೂ ಚರಿತ್ರೆಯು ಹಾಸುಹೊಕ್ಕಾಗಿದೆ ಮತ್ತು ಇದು ಪೀಳಿಗೆಯಿಂದ ಪೀಳಿಗೆಗೆ ಹೆಚ್ಚುತ್ತಲೇ ಇದೆ ಎಂದು ಮೋದಿ ಹೇಳಿದರು.
ಬಹರಾಯಿಚ್ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಮತ್ತು ಅಭಿವೃದ್ಧಿ ಯೋಜನೆಗಳನ್ನೂ ಉದ್ಘಾಟಿಸಿದ ಪ್ರಧಾನಿ,ಮೆಡಿಕಲ್ ಕಾಲೇಜು ಸ್ಥಾಪನೆಗೆ ಶಿಲಾನ್ಯಾಸವನ್ನೂ ನೆರವೇರಿಸಿ ಕೊರೋನವೈರಸ್ ಬಿಕ್ಕಟ್ಟನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕಾಗಿ ಉತ್ತರ ಪ್ರದೇಶ ಸರಕಾರವನ್ನು ಪ್ರಶಂಸಿಸಿದರು.







