ಉಪ್ಪುಂದ ಸಂತೆಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಆರು ಮಕ್ಕಳ ರಕ್ಷಣೆ

ಕುಂದಾಪುರ, ಫೆ.16: ಉಪ್ಪುಂದ ಸಂತೆಯಲ್ಲಿ ಭಿಕ್ಷಾಟನೆ ನಿರತ ಮತ್ತು ಸಂತೆ ವ್ಯಾಪಾರ ಮಾಡುತ್ತಿದ್ದ ಆರು ಮಂದಿ ಮಕ್ಕಳನ್ನು ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಬೈಂದೂರು ಪೊಲೀಸ್ ಠಾಣೆ, ಉಪ್ಪುಂದ ಗ್ರಾಪಂ ಇಂದು ಜಂಟಿ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದೆ.
ಈ ಕಾರ್ಯಾಚರಣೆಯಲ್ಲಿ ಬಾಲಕಾರ್ಮಿಕ ಪದ್ಧತಿ ಮತ್ತು ಭಿಕ್ಷಾಟನೆ ಬಗ್ಗೆ ಅರಿವು ಮೂಡಿಸಿ, 5 ಗಂಡು ಮಕ್ಕಳು 1 ಹೆಣ್ಣು ಸೇರಿದಂತೆ ಒಟ್ಟು 6 ಮಕ್ಕಳನ್ನು ರಕ್ಷಿಸಲಾಗಿದೆ. ಮಾರಿಯಮ್ಮನ ಮೂರ್ತಿ ಹೊತ್ತು ಭಿಕ್ಷಾಟನೆ ಮಾಡುತ್ತಿದ್ದ ಹಾವೇರಿ ಮೂಲದ ಮಹಿಳೆಯೊಂದಿಗೆ ಆರು ವರ್ಷದ ಬಾಲಕ ಆಟಿಕೆಗಾಗಿ ಪ್ರತ್ಯೇಕವಾಗಿ ಭಿಕ್ಷೆ ಬೇಡುತ್ತಿರುವುದು ಕಂಡುಬಂತು.
ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಕುಂದಾಪುರ ಶಿಶು ಅಭಿವೃದ್ಧಿ ಯೊಜನಾಧಿಕಾರಿ ಶ್ವೇತಾ, ಅಂಗನವಾಡಿ ಮೇಲ್ವಿಚಾರಕಿ ಭಾಗೀರಥಿ, ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿ ಕಾರಿಗಳಾದ ಮಹೇಶ್ ದೇವಾಡಿಗ, ಕಪಿಲಾ, ಸಮಾಜ ಕಾರ್ಯಕರ್ತರಾದ ಯೋಗೀಶ್, ಸುರಕ್ಷಾ, ಸಂದೇಶ, ಬೈಂದೂರು ಠಾಣಾ ಸಿಬ್ಬಂದಿ ಯಶೋದ, ಉಪ್ಪುಂದ ಗ್ರಾಪಂ ಸದಸ್ಯ ಮೋಹನಚಂದ್ರ, ಕಾರ್ಯದರ್ಶಿ ಗಿರಿಜಾ, ಸಿಬ್ಬಂದಿ ನರಸಿಂಹ ಭಾಗವಹಿಸಿದ್ದರು.







