ಮಂಗಳೂರು ಪೊಲೀಸರಿಂದ ಆರೋಪಿಗಳ ಕಾರು ಮಾರಾಟ ಪ್ರಕರಣ ಸಿಐಡಿಗೆ ಹಸ್ತಾಂತರ
ಮಂಗಳೂರು, ಫೆ.16: ವಂಚನೆ ಆರೋಪ ಪ್ರಕರಣದ ಆರೋಪಿಗಳ ಐಷಾರಾಮಿ ಜಾಗ್ವರ್ ಕಾರನ್ನು ಮಂಗಳೂರು ನಗರ ಪೊಲೀಸರು ಮಾರಾಟ ಮಾಡಿದ ಆರೋಪದ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.
ಪೊಲೀಸರಿಂದ ಕಾರು ಮಾರಾಟ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರತಾಪ್ ರೆಡ್ಡಿ ಅವರು ಈ ಬಗ್ಗೆ ವರದಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರಿಗೆ ಸೂಚನೆ ನೀಡಿದ್ದರು.
ಆಯುಕ್ತರು ನಗರ ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಅವರಿಗೆ ವರದಿ ನೀಡುವಂತೆ ಸೂಚನೆ ನೀಡಿದ್ದು, ಈಗಾಗಲೇ ಮಧ್ಯಂತರ ವರದಿ ಎಡಿಜಿಪಿಗೆ ಸಲ್ಲಿಕೆಯಾಗಿದೆ. ಈ ವರದಿಯಲ್ಲಿ ಕಾರು ಮಾರಾಟ ಪ್ರಕರಣ ವರದಿಯಲ್ಲಿ ಸತ್ಯಾಂಶವಿದೆ ಎಂದು ಉಲ್ಲೇಖ ಮಾಡಲಾಗಿದ್ದು, ಈ ಆಧಾರದಲ್ಲಿ ಈ ತನಿಖೆಯನ್ನು ಸಿಐಡಿಗೆ ವಹಿಸಲು ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಿಲ್ಲೆಯ ಕಾರ್ಪೊರೇಟ್ ಸಂಸ್ಥೆಯೊಂದು ಹಣ ದ್ವಿಗುಣಗೊಳಿಸುವ ವ್ಯವಹಾರ ಆರಂಭಿಸಿ, ಸಾವಿರಾರು ಮಂದಿಯಿಂದ ಸುಮಾರು 30 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಿಸಿತ್ತು. ಈ ಕಂಪನಿ ಮಂಗಳೂರಿನಲ್ಲಿ ಕಚೇರಿ ತೆರೆದಿದ್ದು, ಶಕ್ತಿನಗರದ ಮಹಿಳೆ 4.50 ಲಕ್ಷ ರೂ. ಹೂಡಿಕೆ ಮಾಡಿದ್ದರು. ಆದರೆ ತಾನು ವಂಚನೆಗೊಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆ ಮಹಿಳೆ 2020ರ ಅ.16ರಂದು ನಗರ ನಾರ್ಕೋಟಿಕ್ ಆ್ಯಂಡ್ ಎಕನಾಮಿಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಅಪರಾಧ ಪತ್ತೆ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳ ಸಹಿತ ಮೂರು ಐಷಾರಾಮಿ ಕಾರು (ಬಿಎಂಡಬ್ಲು, ಪೋರ್ಷ್, ಜಾಗ್ವರ್) ವಶಪಡಿಸಿಕೊಂಡಿದ್ದರು. ಬಳಿಕ ಆರೋಪಿಗಳ ಜತೆ ಅಕ್ರಮ ಒಳಒಪ್ಪಂದ ನಡೆಸಿ ಜಾಗ್ವರ್ ಕಾರು ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ. ಆ ಹಣವನ್ನು ಪೊಲೀಸರೇ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಕಾರು ಮಾರಾಟ ಆರೋಪ ಸೇರಿದಂತೆ ಕನ್‌ಸ್ಟ್ರಕ್ಷನ್ ಆ್ಯಂಡ್ ಬಿಲ್ಡರ್ಸ್ ಕಾರ್ಪೊರೇಟ್ ಸಂಸ್ಥೆಯ ಪ್ರಕರಣದ ಸಮಗ್ರ ತನಿಖೆಗೆ ಸಿಐಡಿಗೆ ಹಸ್ತಾಂತರಿಸಲಿದೆ ಎಂದು ಮೂಲಗಳು ತಿಳಿಸಿವೆ.
ವಂಚನೆ ಪ್ರಕರಣದ ಆರೋಪಿಗಳ ಕಾರು ಮಾರಾಟ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಶೀಘ್ರದಲ್ಲೇ ಸಿಐಡಿ ತಂಡ ನೇಮಕವಾಗುವ ಸಾಧ್ಯತೆ ಇದೆ. ಸುಮಾರು 40 ಪುಟಗಳ ವರದಿಯನ್ನು ಸಲ್ಲಿಕೆ ಮಾಡಲಾಗಿದ್ದು, ಸಿಐಡಿಯು ತನಿಖೆಯನ್ನು ಮುಂದುವರಿಸಲಿದೆ.
- ಎನ್.ಶಶಿಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ







