ಇರಾಕ್: ಅಮೆರಿಕದ ವಾಯುನೆಲೆ ಮೇಲೆ ಸರಣಿ ರಾಕೆಟ್ ದಾಳಿ: ವಿದೇಶಿ ಗುತ್ತಿಗೆದಾರ ಸಾವು; ಸೈನಿಕ ಸೇರಿ 6 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ
ಬಗ್ದಾದ್ (ಇರಾಕ್), ಫೆ. 16: ಇರಾಕ್ನ ಕುರ್ದಿಸ್ತಾನ್ ವಲಯದಲ್ಲಿರುವ ಅಮೆರಿಕದ ವಾಯುನೆಲೆಯೊಂದರ ಮೇಲೆ ಸೋಮವಾರ ರಾತ್ರಿ ನಡೆದ ಸರಣಿ ರಾಕೆಟ್ ದಾಳಿಯಲ್ಲಿ ಓರ್ವ ವಿದೇಶಿ ನಾಗರಿಕ ಗುತ್ತಿಗೆದಾರ ಮೃತಪಟ್ಟಿದ್ದಾರೆ ಹಾಗೂ ಓರ್ವ ಅಮೆರಿಕ ಸೈನಿಕ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ ಎಂದು ಅಮೆರಿಕ ನೇತೃತ್ವದ ಮಿತ್ರಕೂಟ ತಿಳಿಸಿದೆ.
ಇರಾಕ್ನ ಸ್ವಾಯತ್ತ ಕುರ್ದಿಸ್ತಾನ್ ವಲಯದ ರಾಜಧಾನಿ ಅರ್ಬಿಲ್ನ ಹೊರವಲಯದಲ್ಲಿ ಸೋಮವಾರ ರಾತ್ರಿ 9:30ರ ಸುಮಾರಿಗೆ ಭಾರೀ ಸ್ಫೋಟಗಳ ಸದ್ದು ಕೇಳಿತು ಎಂದು ಎಎಫ್ಪಿ ಸುದ್ದಿ ಸಂಸ್ಥೆಯ ವರದಿಗಾರರೊಬ್ಬರು ವರದಿ ಮಾಡಿದ್ದಾರೆ.
ನಗರದ ವಿಮಾನ ನಿಲ್ದಾಣದ ದಿಕ್ಕಿನತ್ತ ಕನಿಷ್ಠ ಮೂರು ರಾಕೆಟ್ಗಳನ್ನು ಉಡಾಯಿಸಲಾಯಿತು ಎಂದು ಇರಾಕ್ ಮತ್ತು ಪಾಶ್ಚಾತ್ಯ ಭದ್ರತಾ ಮೂಲಗಳು ಎಎಫ್ಪಿಗೆ ತಿಳಿಸಿವೆ. ಆ ಪ್ರದೇಶದಲ್ಲಿ ಐಸಿಸ್ ವಿರುದ್ಧ ಹೋರಾಟ ನಡೆಸುತ್ತಿರುವ ಅಂತರ್ರಾಷ್ಟ್ರೀಯ ಮಿತ್ರಕೂಟದ ವಿದೇಶಿ ಸೈನಿಕರು ನೆಲೆಸಿದ್ದಾರೆ.
ಇತರ ಎರಡು ರಾಕೆಟ್ಗಳು ಅರ್ಬಿಲ್ನ ಹೊರವಲಯದ ಜನವಸತಿ ಸ್ಥಳಗಳಲ್ಲಿ ಬಿದ್ದವು.
ಅಮೆರಿಕ ಕೆಂಡ
ಇರಾಕ್ನ ಕುರ್ದಿಸ್ತಾನದಲ್ಲಿರುವ ತನ್ನ ವಾಯುನೆಲೆಯ ಮೇಲೆ ನಡೆದ ರಾಕೆಟ್ ದಾಳಿಗೆ ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ.
‘‘ಇಂದಿನ ರಾಕೆಟ್ ದಾಳಿಯಿಂದ ನಾವು ಆಕ್ರೋಶಗೊಂಡಿದ್ದೇವೆ’’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ ಹಾಗೂ ದಾಳಿಗೆ ಕಾರಣರಾದವರನ್ನು ಶಿಕ್ಷಿಸುವುದಾಗಿ ಹೇಳಿದ್ದಾರೆ.







