ಟೂಲ್ ಕಿಟ್ ಪ್ರಕರಣ: ದಿಶಾ ರವಿ ಬಿಡುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಧರಣಿ

ಬೆಂಗಳೂರು, ಫೆ.16: ಟೂಲ್ ಕಿಟ್ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಕೆಆರ್ ವೃತ್ತದ ಬಳಿ ಎನ್‍ಎಸ್‍ಯುಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಕೇಂದ್ರ ಸರಕಾರ ಹೋರಾಟಗಾರರನ್ನು ಬೆದರಿಸುವ, ವಿದ್ಯಾರ್ಥಿನಿಯ ದನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ದಿಶಾ ರವಿ ಯಾವುದೇ ತಪ್ಪು ಮಾಡಿಲ್ಲ, ಅವರನ್ನು ಅನಗತ್ಯ ಬಂಧಿಸಿ ಒತ್ತಡ ಹೇರುವ ತಂತ್ರ ಮಾಡಲಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ದೇಶದ್ರೋಹದ ಆರೋಪವನ್ನು ಹೊರಿಸಬೇಕಾದರೆ ಅದು ಹೊಸದಿಲ್ಲಿ ಪೊಲೀಸರ ಮೇಲೆ ಹೊರಿಸಬೇಕು. ಟೂಲ್ ಕಿಟ್‍ನಲ್ಲಿ ಕೇವಲ ಪ್ರತಿಭಟನೆ ಹೇಗೆ ಮಾಡಬೇಕು ಎಂಬ ನಿರ್ದೇಶನವಿದೆ ಹೊರತು ಬೇರೆ ಯಾವುದೇ ವಿಚಾರಗಳು ಇಲ್ಲ. ಹಿಂಸಾಚಾರ ಹಬ್ಬಿಸುವ ವಿಚಾರ ಅದರಲ್ಲಿ ಇಲ್ಲ ಎಂದು ವಿದ್ಯಾರ್ಥಿಗಳು ವಾಗ್ದಾಳಿ ನಡೆಸಿದರು.
ಖಂಡನೆ: ರೈತ ಹೋರಾಟಕ್ಕೆ ಬೆಂಬಲಿಸಿದ ಕಾರಣಕ್ಕಾಗಿ ಹಾಗೂ ರೈತ ಹೋರಾಟಕ್ಕೆ ಯಾವ ರೀತಿಯಲ್ಲಿ ಬೆಂಬಲಿಸಬಹುದು ಎಂಬ ಮಾರ್ಗಸೂಚಿ ಮಾಹಿತಿ (ಟೂಲ್ ಕಿಟ್) ಹಂಚಿಕೊಂಡ ಕಾರಣಕ್ಕಾಗಿ ನಡೆದಿರುವ ದಿಶಾ ರವಿರವರ ಬಂಧನ ಕಾನೂನುಬಾಹಿರ ಹಾಗೂ ಅಕ್ರಮ ಎಂದು ಸಂಯುಕ್ತ ಹೋರಾಟ-ಕರ್ನಾಟಕ ಕಟುವಾಗಿ ಟೀಕಿಸಿದೆ.
ಯಾವುದೇ ವ್ಯಕ್ತಿಯನ್ನು ಬಂಧನಕ್ಕೆ ಒಳಪಡಿಸಬೇಕಾದರೆ ಹಾಗೂ ಬಂಧಿಸಿದ ವ್ಯಕ್ತಿಯನ್ನು ಬಂಧನದ ಸ್ಥಳದ ವ್ಯಾಪ್ತಿಯಿಂದ ಹೊರಗೆ ಸಾಗಿಸಬೇಕಾದರೆ ಸಂಬಂಧಿಸಿದ ನ್ಯಾಯಾಲಯದ ಅನುಮತಿ ಅಗತ್ಯ. ಆದರೆ ಹೊಸದಿಲ್ಲಿ ಪೊಲೀಸರು ದಿಶಾ ರವಿರವರನ್ನು ಅಪಹರಣ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿ, ಸಂಬಂಧಿಸಿದ ಕೋರ್ಟ್‍ನಿಂದ ಅನುಮತಿ ಹಾಗೂ ಸ್ಥಳೀಯ ಪೊಲೀಸರಿಗೆ ಅಗತ್ಯ ಮಾಹಿತಿ ನೀಡದೆ ನೆಲದ ಕಾನೂನನ್ನು ಉಲ್ಲಂಘಿಸಿದೆ. ಇಂತಹ ಅಕ್ರಮ ಕಾನೂನುಬಾಹಿರ ಹಾಗೂ ಮಾನವ ಹಕ್ಕುಗಳಿಗೆ ಚ್ಯುತಿ ತಂದಿರುವ ಹೊಸದಿಲ್ಲಿ ಪೊಲೀಸರ ಮೇಲೆ ಕಠಿಣ ಕ್ರಮ ಜರುಗಿಸಲು ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಆಗ್ರಹಿಸಿದೆ.







