ಫೆಲೆಸ್ತೀನ್‌ಗೆ ರವಾನೆಯಾಗುತ್ತಿದ್ದ ‘ಸ್ಪೂಟ್ನಿಕ್’ ಲಸಿಕೆಯನ್ನು ತಡೆದ ಇಸ್ರೇಲ್

ಜೆರುಸಲೇಮ್, ಫೆ. 16: ಆಕ್ರಮಿತ ಗಾಝಾ ಪಟ್ಟಿಯಲ್ಲಿರುವ ಮುಂಚೂಣಿಯ ವೈದ್ಯಕೀಯ ಸಿಬ್ಬಂದಿಯ ಬಳಕೆಗಾಗಿ ರವಾನೆಯಾಗುತ್ತಿದ್ದ ರಶ್ಯದ ‘ಸ್ಪೂಟ್ನಿಕ್’ ಕೊರೋನ ವೈರಸ್ ಲಸಿಕೆಯ 1,000 ಡೋಸ್‌ಗಳನ್ನು ಇಸ್ರೇಲ್ ತಡೆದಿದೆ.
ಫೆಲೆಸ್ತೀನ್ ಪ್ರಾಧಿಕಾರ ಆದೇಶಿಸಿರುವ ಕೊರೋನ ವೈರಸ್ ಡೋಸ್‌ಗಳ ಸರಕನ್ನು ತಡೆದಿರುವುದರ ಸಂಫೂರ್ಣ ಜವಾಬ್ದಾರಿಯನ್ನು ಇಸ್ರೇಲ್ ಹೊರುತ್ತದೆ ಎಂದು ಫೆಲೆಸ್ತೀನ್ ಆರ್ಗೋ ಸಚಿವ ಮಾಯಿ ಅಲ್‌ಕೈಲ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದರು.
ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯ ಕೆಲವು ಭಾಗಗಳ ಆಡಳಿತ ಫೆಲೆಸ್ತೀನ್ ಪ್ರಾಧಿಕಾರದ ನಿಯಂತ್ರಣದಲ್ಲಿದೆ.
ತನ್ನ ಲಸಿಕೆಯನ್ನು ಹಮಾಸ್ ಆಡಳಿತಕ್ಕೆ ಒಳಪಟ್ಟಿರುವ ಗಾಝಾದೊಂದಿಗೆ ಹಂಚಿಕೊಳ್ಳುವುದಾಗಿ ಫೆಲೆಸ್ತೀನ್ ಪ್ರಾಧಿಕಾರ ಹೇಳಿದೆ. 20 ಲಕ್ಷಕ್ಕೂ ಅಧಿಕ ಫೆಲೆಸ್ತೀನಿಯರು ವಾಸಿಸುತ್ತಿರುವ ಗಾಝಾಕ್ಕೆ ಈವರೆಗೆ ಯಾವುದೇ ಕೊರೋನ ವೈರಸ್ ಲಸಿಕೆ ಬಂದಿಲ್ಲ.
ಫೆಲೆಸ್ತೀನ್ ಪ್ರದೇಶಕ್ಕೆ ಲಸಿಕೆ ಸಾಗಾಟಕ್ಕೆ ಅನುಮತಿ ನೀಡುವ ವಿಷಯದ ಬಗ್ಗೆ ಚರ್ಚೆ ಮುಂದುವರಿದಿದೆ ಎಂದು ಇಸ್ರೇಲ್ ಅಧಿಕಾರಿಯೊಬ್ಬರು ಹೇಳಿದ್ದಾರೆ.





