ಫೆ. 19ರಂದು ತುಳು ಚಲನಚಿತ್ರ 'ಗಮ್ಜಾಲ್' ಬಿಡುಗಡೆ
ಮಂಗಳೂರು: ತುಳು ಭಾಷೆಯ115ನೇ ಚಿತ್ರ ಗಮ್ಜಾಲ್ ಇದೇ ಶುಕ್ರವಾರ ಫೆ. 19ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ. ಒಂದು ವರ್ಷದ ಬಳಿಕ ಗಮ್ಜಾಲ್ ತುಳುಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಗೆ ಸಿದ್ದವಾಗಿದೆ ಎಂದು ತಂಡದ ಪ್ರವರ್ತಕ ರೂಪೇಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಆರ್. ಎಸ್. ಸಿನೆಮಾಸ್ ಲಾಂಛನದಲ್ಲಿ ಚಿತ್ರ ಮೂಡಿಬಂದಿದೆ. ಶೂಲಿನ್ ಫಿಲಂಸ್ ಹಾಗೂ ಮುಗ್ರೋಡಿ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದಾರೆ. ರೂಪೇಶ್ ಶೆಟ್ಟಿ ಕಥೆ ಹಾಗೂ ಚಿತ್ರಕಥೆ ಬರೆದಿದ್ದು, ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಬರೆದಿದ್ದಾರೆ. ಬ್ಯಾರೆಲ್ ಹಾಗೂ ಜೋಯೆಲ್ ಸಂಗೀತ ನೀಡಿದ್ದು ರಾಹುಲ್ ವಸಿಷ್ಠ ಸಂಕಲನ, ನಿರಂಜನ್ ದಾಸ್ ಛಾಯಾಗ್ರಹಣ, ನವೀನ್ ಶೆಟ್ಟಿ ಹಾಗೂ ಸುಮನ್ ಸುವರ್ಣ ನಿರ್ದೇಶನ ಮಾಡಿದ್ದಾರೆ.
ಗುರುಕಿರಣ್ ಅವರ ಹಾಡು ಈಗಾಗಲೇ ಹಿಟ್ ಆಗಿದ್ದು ಬಿಡುಗಡೆಯಾಗಿರುವ ಎರಡು ಟ್ರೈಲರ್‌ಗಳು ತುಂಬಾ ಸದ್ದು ಮಾಡಿದೆ. ಫೆ19ರಂದು ತುಳು ಚಿತ್ರರಂಗಕ್ಕೆ 50ವರ್ಷ ತುಂಬಲಿದ್ದು ಅದೇ ದಿನ ಗಮ್ಜಾಲ್ ಬಿಡುಗಡೆಯಾಗಲಿದೆ.
ಮಂಗಳೂರಿನಲ್ಲಿ ರಮಾಕಾಂತಿ ಹಾಗೂ ಎಲ್ಲಾ ಮಲ್ಟಿಪ್ಲೆಕ್ಸ್, ಸುರತ್ಕಲ್ ನಟರಾಜ್, ಉಡುಪಿಯಲ್ಲಿ ಕಲ್ಪನಾ, ಮಣಿಪಾಲ್‌ನಲ್ಲಿ ಭಾರತ್ ಸಿನೆಮಾಸ್ ಹಾಗೂ ಐನಕ್ಸ್, ಕಾರ್ಕಳದಲ್ಲಿ ರಾಧಿಕಾ ಹಾಗೂ ಪ್ಲಾನೆಟ್, ಸುಳ್ಯದಲ್ಲಿ ಸಂತೋಷ್, ಮೂಡಬಿದಿರೆಯಲ್ಲಿ ಅಮರ ಹಾಗೂ ಕಾಸರಗೋಡಿನಲ್ಲಿ ಕೃಷ್ಣಾದಲ್ಲಿ ಬಿಡುಗಡೆಯಾಗಲಿದೆ ಎಂದು ರೂಪೇಶ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತುಳು ಚಲನಚಿತ್ರ ರಂಗದ ಖ್ಯಾತ ನಟರಾದ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ಚಿತ್ರ ತಂಡದ ಪ್ರಸನ್ನ ಶೆಟ್ಟಿ, ಡ್ಯಾರೆಲ್, ಜೋ ಯೆಲ್, ರಾಹುಲ್ ವಸಿಷ್ಠ, ನಿರಂಜನದಾಸ್, ವಿಶ್ವನಾಥ್, ಹರ್ಷ,ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







