ಪೊಲೀಸ್ ಕಮಿಷನರ್ ಹೆಸರಿನಲ್ಲಿ ಬೆದರಿಕೆ: ಆಂಧ್ರ ಮೂಲದ ಮೂವರು ಆರೋಪಿಗಳ ಬಂಧನ

ಮಲ್ಪೆ, ಫೆ.16: ಪೊಲೀಸ್ ಕಮಿಷನರ್ ಹೆಸರಿನಲ್ಲಿ ಸಾರ್ವಜನಿಕರನ್ನು ಬೆದರಿಸಿ ವಂಚಿಸುತ್ತಿದ್ದ ಮೂವರು ನಕಲಿ ಪೊಲೀಸರನ್ನು ಮಲ್ಪೆ ಪೊಲೀಸರು ಫೆ.15ರಂದು ರಾತ್ರಿ ಮಲ್ಪೆ ಅಂಚೆ ಕಛೇರಿ ಎದುರು ಬಂಧಿಸಿದ್ದಾರೆ.
ಆಂಧ್ರ ಮೂಲದ ರಾಘಸಂದೇಶ(35), ಪ್ರೇಮ್ ಕುಮಾರ್ ಹಾಗೂ ಶಿವಪ್ರಸಾದ್ ಬಂಧಿತ ಆರೋಪಿಗಳು. ಇವರು ತಮ್ಮ ಖಾಸಗಿ ವಾಹನಕ್ಕೆ ಪೊಲೀಸ್ ಎಂಬ ಸ್ಟಿಕ್ಕರ್ ಅಂಟಿಸಿದ್ದು, ಮಲ್ಪೆಯಿಂದ ವಢಬಾಂಢೇಶ್ವರ ಕಡೆಗೆ ಹೋಗುತ್ತಿದ್ದ ಸಿಟಿ ಬಸ್‌ನ್ನು ಅಡ್ಡಗಟ್ಟಿ, ಬಳಿಕ ರಾಘಸಂದೇಶ ತಾನು ಪೊಲೀಸ್ ಕಮೀಷನರ್ ಎಂದು ಹೇಳಿ ಚಾಲಕನಿಗೆ ಬೈದಿದ್ದನು ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಲ್ಪೆ ಪೊಲೀಸರು, ಆತನ ದಾಖಲೆಗಳನ್ನು ಪರಿಶೀಲಿಸಿದಾಗ ಆತನು ಯಾವುದೇ ಸರಕಾರಿ ಅಧಿಕಾರಿ ಆಗಿರದೆ ಸಾರ್ವಜನಿಕ ವ್ಯಕ್ತಿಯಾಗಿರುವುದು ಕಂಡುಬಂದಿದೆ. ಪೊಲೀಸ್ ಕಮೀಷನರ್ ಎಂದು ಹೇಳಿಕೊಂಡು ಸಾರ್ವಜನಿಕರಿಗೆ ಬೆದರಿಕೆ ಹಾಕಿ ಮೋಸ ಮಾಡಿರುವ ಆರೋಪದಲ್ಲಿ ಇವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





