ಇಂಧನ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಬೋರ್‌ವೆಲ್ ಮಾಲಕರ ಬೃಹತ್ ಪ್ರತಿಭಟನೆ

ಬೆಂಗಳೂರು, ಫೆ.16: ಕೇಂದ್ರ ಸರಕಾರವು ಇಂಧನ ಬೆಲೆಯನ್ನು ದಿಢೀರ್ ಏರಿಕೆ ಮಾಡಿರುವುದನ್ನು ಖಂಡಿಸಿ ರಾಜ್ಯವ್ಯಾಪಿ ಬೋರ್‌ವೆಲ್ ವಾಹನದ ಮಾಲಕರು ಬೃಹತ್ ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಮುದ್ದಿನಪಾಳ್ಯ ಸರ್ಕಲ್ ಬಳಿ ಕರ್ನಾಟಕ ರಿಗ್ ಓನರ್ಸ್ ಸಂಘದ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಲಾರಿಗಳ ಮಾಲಕರಿಗೆ ಮಾತ್ರವಲ್ಲದೆ ಜನಸಾಮಾನ್ಯರಿಗೂ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಎಸ್.ನಾಗೇಶ್, ಬೆಲೆ ಏರಿಕೆಯಿಂದ ಡ್ರಿಲ್ಲಿಂಗ್ ಬೆಲೆ ಏರಿಕೆ ಅನಿವಾರ್ಯ, ಇದರಿಂದ ಗ್ರಾಹಕರ ಮೇಲೆ ಹೊರೆ ಬೀಳಲಿದೆ. ಹಾಗಾಗಿ ಡೀಸೆಲ್ ದರ ಏರಿಸಿರುವುದು ಮಾತ್ರವಲ್ಲದೆ ರೈತರ ಜಮೀನಿನಲ್ಲಿ ತೆಗೆಯುವ ಬೋರ್‌ವೆಲ್‍ಗಳ ವೆಚ್ಚವು ಹೆಚ್ಚಾಗುವ ಭೀತಿಯಿದ್ದು, ತಮ್ಮ ಕಾಮಗಾರಿಗಳನ್ನೇ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಕಳೆದ ಹತ್ತು ದಿನಗಳಿಂದ ರಾಜ್ಯಾದ್ಯಂತ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಬೋರ್‌ವೆಲ್ ವಾಹನಗಳು ಈಗಾಗಲೇ ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿವೆ. ಇದು ಹೀಗೆಯೇ ಮುಂದುವರೆದಲ್ಲಿ ಹೋರಾಟವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸದ್ಯ ಕೆಲ ದಿನಗಳಿಂದ ರಾಜ್ಯದ ವಿವಿಧ ಜಿಲ್ಲಾಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆದರೂ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ದೊರಕದ ಕಾರಣ ಬೆಂಗಳೂರಿನಲ್ಲಿ ಪ್ರತಿಭಟನೆ ಆರಂಭಿಸಲಾಗಿದೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.







