ಭಾರತದಲ್ಲಿ ದ್ವೇಷ ಭಾಷಣದ ಉದ್ದೇಶ ಅಲ್ಪಸಂಖ್ಯಾತರಲ್ಲಿ ಭೀತಿ ಹುಟ್ಟಿಸುವುದಾಗಿದೆ: ಅಧ್ಯಯನ ವರದಿಯಲ್ಲಿ ಉಲ್ಲೇಖ

ಹೊಸದಿಲ್ಲಿ, ಫೆ.16: ‘ಆನ್‌ಲೈನ್‌ನಲ್ಲಿ ದ್ವೇಷ ಭಾಷಣದ ಕುರಿತ ಕಾನೂನಿನಿಂದ ನುಣುಚಿಕೊಳ್ಳಲು ಹಲವು ಭಾರತೀಯರು, ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸ್ಲಿಮರನ್ನು ಗುರಿಯಾಗಿಸಲು ಅದಕ್ಕಿಂತ ಸ್ವಲ್ಪ ಮೆದುವಾದ ವಿಧಾನವಾಗಿ ಅವರ ಬಗ್ಗೆ ಭೀತಿಯನ್ನು ಹರಡುವ ಕಾರ್ಯದಲ್ಲಿ ತೊಡಗಿದ್ದರು’ ಎಂದು ಭಾರತದಲ್ಲಿ 2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಅಧ್ಯಯನ ವರದಿ ತಿಳಿಸಿದೆ.
‘ಶಾರ್ಟ್ ಈಸ್ ದಿ ರೋಡ್ ದ್ಯಾಟ್ ಲೀಡ್ಸ್ ಫ್ರಮ್ ಫಿಯರ್ ಟು ಹೇಟ್: ಫ್ರೀ ಸ್ಪೀಚ್ ಇನ್ ವಾಟ್ಸ್ ಆ್ಯಪ್ ಗ್ರೂಪ್’ ಎಂಬ ಹೆಸರಿನ ಈ ಸಂಶೋಧನಾ ವರದಿಯು ಕಾರ್ನೆಲ್ ವಿವಿಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ. 2019ರ ಸಾರ್ವತ್ರಿಕ ಚುನಾವಣೆ ಸಂದರ್ಭ ಸಾರ್ವಜನಿಕ ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ (ಸಮೀಕ್ಷೆಗೆ ಒಳಪಟ್ಟ) ಪೋಸ್ಟ್ ಮಾಡಿರುವ 5ರಲ್ಲಿ ಒಂದಕ್ಕಿಂತ ಹೆಚ್ಚು ಸಂದೇಶಗಳು ಭೀತಿ ಹುಟ್ಟಿಸುವ ಶೈಲಿಯಲ್ಲಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಐಟಿಐ ಖರಗ್‌ಪುರದ ಪುಣ್ಯಜೋಯ್ ಸಾಹ, ಬಿನ್ನಿ ಮ್ಯಾಥ್ಯೂ ಮತ್ತು ಅನಿಮೇಶ್ ಮುಖರ್ಜಿ ಹಾಗೂ ಅಮೆರಿಕದ ಮ್ಯಾಸಚೂಸಿಟ್ಸ್ ವಿವಿಯ ಕಿರಣ್ ಗರಿಮೆಲ್ಲ ಜಂಟಿಯಾಗಿ ಅಧ್ಯಯನ ನಡೆಸಿದ್ದರು.
ದ್ವೇಷ ಭಾಷಣ ಎಂದರೆ ‘ಉದ್ದೇಶಿತ ಗುಂಪಿನಲ್ಲಿ (ಧಾರ್ಮಿಕ ಅಥವಾ ಜನಾಂಗೀಯ) ಭಯವನ್ನು ಹುಟ್ಟುಹಾಕುವ ಅಭಿವ್ಯಕ್ತಿ’ ಎಂದು ವರದಿಯಲ್ಲಿ ವಿವರಿಸಲಾಗಿದ್ದು ದ್ವೇಷ ಭಾಷಣವನ್ನು ಪತ್ತೆಹಚ್ಚುವ ನೂತನ ಮಾರ್ಗದ ಅಗತ್ಯವಿದೆ ಎಂದು ಹೇಳಿದೆ. ದ್ವೇಷರಹಿತ ಭಾಷಣಕ್ಕೆ ಹೋಲಿಸಿದರೆ ದ್ವೇಷ ಭಾಷಣ ಹೆಚ್ಚಿನ ವೇಗದಿಂದ ಪ್ರಸಾರವಾಗುತ್ತದೆ ಮತ್ತು ಹೆಚ್ಚು ಕಾಲ ಬಾಳಿಕೆ ಹೊಂದಿದೆ ಎಂದು ವರದಿ ಹೇಳಿದೆ.
ಹೆಚ್ಚಿನ ಸಂದರ್ಭದಲ್ಲಿ ದ್ವೇಷವನ್ನು ನೇರವಾಗಿ ಪ್ರಸಾರಮಾಡದೆ ಭೀತಿಯ ರೂಪದಲ್ಲಿ ಹರಡಲಾಗುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 5010 ಸಾರ್ವಜನಿಕ ವಾಟ್ಸ್ ಆ್ಯಪ್ ಗುಂಪುಗಳ (ಒಟ್ಟು 1,09,542 ಬಳಕೆದಾರರನ್ನು ಹೊಂದಿರುವ) 14,26,482 ಪೋಸ್ಟ್‌ಗಳನ್ನು ಗಮನಿಸಿ ಈ ಅಧ್ಯಯನ ವರದಿ ತಯಾರಿಸಿದ್ದು, ಪ್ರತೀ ವಾಟ್ಸ್ ಆ್ಯಪ್ ಗುಂಪುಗಳಲ್ಲಿ ಸರಾಸರಿ 30 ಬಳಕೆದಾರರಿದ್ದಾರೆ ಮತ್ತು ಪ್ರತೀ ಗುಂಪಿನಲ್ಲಿ ಸರಾಸರಿ 284 ಸಂದೇಶಗಳು ರವಾನೆಯಾಗಿವೆ.
ಈ ಗುಂಪಿನಲ್ಲಿ ಪ್ರತೀ ಸಂದೇಶದ ಸರಾಸರಿ ಗಾತ್ರ 89 ಪದಗಳಾಗಿವೆ. ದಬ್ಬಾಳಿಕೆ, ಅಪರಾಧ, ದ್ವೇಷ, ಜಗಳ ಮತ್ತು ನಕಾರಾತ್ಮಕ ಭಾವೋದ್ರೇಕದ ಮೂಲಕ ಬಹುತೇಕ ಸಂದರ್ಭದಲ್ಲಿ ಭೀತಿಯನ್ನು ಹುಟ್ಟಿಸಲಾಗಿದೆ. ಸ್ಥಳೀಯ ಇಮೋಜಿಗಳ ಬಳಕೆಯಿಂದ ಈ ಪೋಸ್ಟ್‌ಗಳಿಗೆ ಇನ್ನಷ್ಟು ತೂಕ ನೀಡಲಾಗಿದೆ. ಮುಸ್ಲಿಮರು ಕ್ರಿಮಿನಲ್‌ಗಳು ಹಾಗೂ ಹಿಂದುಗಳು ಬಲಿಪಶುಗಳು ಎಂಬ ( ಈಗಾಗಲೇ ಸುಳ್ಳು ಎಂದು ಸಾಬೀತಾಗಿರುವ) ಪಿತೂರಿ ಸಿದ್ಧಾಂತವನ್ನು ಬಹುತೇಕ ಸಂದರ್ಭದಲ್ಲಿ ಬಳಸಲಾಗಿದೆ ಎಂದು ವರದಿ ಹೇಳಿದೆ. ದ್ವೇಷಭಾಷಣದಲ್ಲಿ ನಿರತರಾಗಿರುವವರಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಲು ವಿರೋಧಿಸಿದ ಬಿಜೆಪಿ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದೂ ವರದಿ ತಿಳಿಸಿದೆ.
ದ್ವೇಷ ಭಾಷಣದ ಸುದೀರ್ಘಾವಧಿಯವರೆಗೆ ಬಾಳುತ್ತದೆ ಎಂದು ಈ ಹಿಂದೆಯೇ ಹೇಳಿದಂತೆ, ಈ ಸಂದೇಶಗಳನ್ನು ಇನ್ನಷ್ಟು ಗ್ರೂಪ್ ಗಳಿಗೆ ಮರು ಪೋಸ್ಟ್ ಮಾಡಲಾಗಿದೆ. ಈ ರೀತಿಯ ಸಂದೇಶಗಳನ್ನು ಪೋಸ್ಟ್ ಮಾಡುವವರು ವಾಟ್ಸ್ ಆ್ಯಪ್ ನೆಟ್‌ವರ್ಕ್‌ನ ಕೇಂದ್ರ ಸ್ಥಾನದಲ್ಲಿರುವವರು ಮತ್ತು ‘ಮುಸ್ಲಿಮರ ಅಮಾನವೀಯ ನಿರೂಪಣೆ’ಗೆ ಉತ್ತೇಜನ ನೀಡುವ ಜನರಾಗಿದ್ದಾರೆ ಎಂದು ವರದಿ ಹೇಳಿದೆ. ವಾಟ್ಸ್ ಆ್ಯಪ್ ನ ಮೂಲಕ ದ್ವೇಷ ಭಾಷಣ ಪ್ರಸಾರ ಮಾಡುವವರನ್ನು ಕಾನೂನು ಕ್ರಮಗಳ ಮೂಲಕ ನಿಯಂತ್ರಿಸಲು ಕಷ್ಟಸಾಧ್ಯವಾಗಿದೆ, ಯಾಕೆಂದರೆ ವಾಟ್ಸ್ ಆ್ಯಪ್ ವೇದಿಕೆ ಅಂತ್ಯದಿಂದ ಅಂತ್ಯ(ಎಂಡ್ ಟು ಎಂಡ್) ಗೂಢಲಿಪೀಕರಣ ವ್ಯವಸ್ಥೆಯಲ್ಲಿದೆ ಮತ್ತು ಇದರಲ್ಲಿ ವಿಷಯಗಳನ್ನು ಬಳಸುವುದು ಗ್ರಾಹಕರ ಆಯ್ಕೆಗೆ ಬಿಟ್ಟ ವಿಚಾರವಾಗಿದೆ. ದ್ವೇಷ ಭಾಷಣ ಹರಡುವುದನ್ನು ನಿಯಂತ್ರಿಸಬೇಕಿದ್ದರೆ ಬಳಕೆದಾರರನ್ನು ತಿದ್ದುವುದು ಮತ್ತು ಸತ್ಯಾಂಶ ಪರೀಕ್ಷಿಸುವ ನಿಟ್ಟಿನಲ್ಲಿ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಚರ್ಚೆಗೆ ಪ್ರೋತ್ಸಾಹದ ಅಗತ್ಯವಿದೆ. ಗ್ರಾಹಕರ ಸಾಧನದಲ್ಲಿ ಅಳವಡಿಸುವ ರಹಸ್ಯ ಸಾಧನವನ್ನು ರೂಪಿಸುವುದು ಮತ್ತೊಂದು ಆಯ್ಕೆಯಾಗಿದೆ. ಈ ಸಾಧನಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸುವ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಪೂರ್ವಾಗ್ರಹ ಭಾವನೆ ನಾವು ತಿಳಿದುಕೊಂಡಿದ್ದಕ್ಕಿಂತಲೂ ಬೃಹತ್ ಮಟ್ಟದಲ್ಲಿದೆ. ಈ ವರದಿಯಲ್ಲಿ ಮುಸ್ಲಿಮರ ವಿರುದ್ಧ ವಾಟ್ಸ್ ಆ್ಯಪ್ ನಲ್ಲಿ ದ್ವೇಷ ಭಾಷಣ ಹರಡುವುದರ ಬಗ್ಗೆ ಗಮನ ಕೇಂದ್ರೀಕರಿಸಿದ್ದರೂ, ಈ ಸಮಸ್ಯೆಯ ವ್ಯಾಪ್ತಿ ಮುಸ್ಲಿಮರಿಗೆ ಅಥವಾ ವಾಟ್ಸ್ ಆ್ಯಪ್ ಗುಂಪುಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಅಧ್ಯಯನ ವರದಿ ಹೇಳಿದೆ.







