ಮುಖ್ಯಮಂತ್ರಿ, ಸಚಿವರ ರಾಜೀನಾಮೆಗೆ ಪಟ್ಟು: ದಲಿತ ಮತ್ತು ಮೈನಾರಿಟೀಸ್ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

ಬೆಂಗಳೂರು, ಫೆ.16: ಕ್ರಿಮಿನಲ್ ಮೊಕದ್ದಮೆ ಆರೋಪ ಹೊತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದಲಿತ ಮತ್ತು ಮೈನಾರಿಟೀಸ್ ಸೇನೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ದಲಿತ ಮತ್ತು ಮೈನಾರಿಟೀಸ್ ಸೇನೆ ಕಾರ್ಯಕರ್ತರು, ಈ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಅದೇ ರೀತಿ, ಸಾಮಾಜಿಕ ಹೋರಾಟಗಾರ, ದಿ ಹೆಲ್ಪಿಂಗ್ ಸಿಟಿಜನ್ ಅಂಡ್ ಪೀಪಲ್ಸ್ ಕೋರ್ಟ್ ಸಂಸ್ಥಾಪಕ ಎ.ಆಲಂ ಪಾಷಾ ಅವರಿಗೆ ಈ ಕೂಡಲೇ ಪೊಲೀಸ್ ಭದ್ರತೆ ಕಲ್ಪಿಸಬೇಕೆಂದು ಒತ್ತಾಯ ಮಾಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸೇನೆಯ ರಾಜ್ಯಾಧ್ಯಕ್ಷ ಎ.ಜೆ.ಖಾನ್, ರಾಜಧಾನಿ ಬೆಂಗಳೂರಿನ ಹೊರವಲಯದ ದೇವನಹಳ್ಳಿಯ ಇಂಡಸ್ಟ್ರಿಯಲ್ ಹಾರ್ಡ್‍ವೇರ್ ಪಾರ್ಕ್‍ನಲ್ಲಿ 26 ಎಕರೆ ಜಮೀನನ್ನು ದಿ ಹೆಲ್ಪಿಂಗ್ ಸಿಟಿಜನ್ ಅಂಡ್ ಪೀಪಲ್ಸ್ ಕೋರ್ಟ್ ಸಂಸ್ಥಾಪಕ ಎ.ಆಲಂ ಪಾಷಾ ಅವರ ಕಂಪೆನಿಗೆ 2010-11ನೇ ಸಾಲಿನಲ್ಲಿ ರಾಜ್ಯ ಸರಕಾರ ಮಂಜೂರು ಮಾಡಿತ್ತು.
ಇದಾದ ನಂತರ 2011ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ಹಿಂಪಡೆದಿದ್ದಾರೆ ಎನ್ನುವ ಆರೋಪ ಇದೆ ಎಂದು ದೂರಿದರು.
ಆರೋಪ ಪ್ರಕರಣದಲ್ಲಿ ಸಚಿವ ಮುರಗೇಶ್ ನಿರಾಣಿ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಖಾಸಗಿ ದೂರು ರದ್ದುಪಡಿಸಿದ ಲೋಕಾಯಕ್ತ ಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ. ಅಷ್ಟೇ ಅಲ್ಲದೆ, ಹಿಂಪಡೆದ ಜಮೀನನ್ನು ಬೇರೆ ಕಂಪೆನಿಗೆ ಮಾರಾಟ ಮಾಡಿದ್ದಾರೆಂದು ಆರೋಪಿಸಿ ಆಲಂ ಪಾಷಾ, 2016ರಲ್ಲಿ ಲೋಕಾಯುಕ್ತ ಕೋರ್ಟ್‍ಗೆ ಖಾಸಗಿ ದೂರು ದಾಖಲಿಸಿದ್ದರು. ತದನಂತರ, ದೂರು ದಾಖಲಿಸಲು ಪೂರ್ವಾನುಮತಿ ಪಡೆದಿಲ್ಲ ಎಂದು ತಿಳಿಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಅವರ ದೂರನ್ನು ವಜಾಗೊಳಿಸಿತ್ತು. ಆದರೆ, ಈ ಆದೇಶ ರದ್ದುಪಡಿಸಲು ಕೋರಿ 2016ರಲ್ಲಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈಗ ಹೈಕೋರ್ಟ್ ಪೂರ್ವಾಮತಿ ಪಡೆಯುವುದು ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾ.ಮೈಕಲ್ ಕುನ್ಹಾ, ಪ್ರಕರಣ ವಿಚಾರಣೆಗೆ ಆದೇಶ ನೀಡಿದ್ದಾರೆ ಎಂದು ವಿವರಿಸಿದರು.
ಅಕ್ರಮಗಳ ಸರಮಾಲೆಯೇ ಇರುವ ಸಚಿವ ಮುರಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಿರುವುದು ಸರಿಯಲ್ಲ. ಈ ಕೂಡಲೇ ವರಿಷ್ಠರು ಅವರ ರಾಜೀನಾಮೆ ಪಡೆಯಬೇಕು. ಅದೇರೀತಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ವಯಂಪ್ರೇರಿತ ರಾಜೀನಾಮೆ ನೀಡಬೇಕು. ಮುಖ್ಯವಾಗಿ ಆಲಂ ಪಾಷಾ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ನಮ್ಮ ಒತ್ತಾಯವಾಗಿದೆ ಎಂದರು.







