ಕಡೆಕಾರು ಗ್ರಾಪಂನ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನೆ

ಉಡುಪಿ, ಫೆ.16: ಕಡೆಕಾರ್ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸರಸ್ವತಿ ಹಾಗೂ ನವೀನ್ ಶೆಟ್ಟಿ ಅವರಿಗೆ ಗ್ರಾಪಂ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
21 ಸದಸ್ಯ ಬಲದ ಕಡೆಕಾರು ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ 13 ಸದಸ್ಯರಿದ್ದು, ಬಿಜೆಪಿ ಬೆಂಬಲಿತ ಎಂಟು ಸದಸ್ಯರಿದ್ದಾರೆ. ಸ್ಪಷ್ಟ ಬಹುಮತವನ್ನು ಹೊಂದಿರುವ ಕಾಂಗ್ರೆಸ್ ನಿರಾಯಾಸವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತನ್ನ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಯಿತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಘೋಷಣೆಯಾದ ಬಳಿಕ ಪಕ್ಷದ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ದಿವಾಕರ ಕುಂದರ್ ಮಾತನಾಡಿ, ಪಂಚಾಯತ್‌ನ ಎಲ್ಲಾ 21 ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ಜನರ ವಿಶ್ವಾಸವನ್ನು ಉಳಿಸುವಂತೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹಿತವಚನ ನುಡಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ಮಾಜಿ ಜಿಪಂ ಸದಸ್ಯ ವಾಮನ ಬಂಗೇರ ಮಾತನಾಡಿದರು. ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅಭಿನಂದನೆಗೆ ಉತ್ತರಿಸಿ, ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಜತಿನ್ ಕಡೆಕಾರ್, ಸತೀಶ್ ಕೋಟ್ಯಾನ್, ತಾರಾನಾಥ್ ಸುವರ್ಣ ಹಾಗೂ ಚುನಾಯಿತ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ನಿರೂಪಿಸಿದರು.







