ಪೂರ್ವ ಲಡಾಖ್: ಭಾರತ-ಚೀನಿ ಸೇನಾಪಡೆಗಳ ಹಿಂತೆಗೆತ ಪ್ರಕ್ರಿಯೆ ಚುರುಕು
ಚೀನಾದಿಂದ ಟೆಂಟ್,ಬಂಕರ್‌ಗಳ ತೆರವು

ಹೊಸದಿಲ್ಲಿ,ಫೆ.16: ಪೂರ್ವ ಲಡಾಖ್ನ ಪಾಂಗೊಂಗ್ ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆಗಳಿಂದ ಸೇನಾ ಹಿಂತೆಗೆತದ ಪ್ರಕ್ರಿಯೆಯನ್ನು ಚೀನಾ ಹಾಗೂ ಭಾರತ ಮುಂದುವರಿಸಿವೆ. ಈ ಪ್ರದೇಶದಲ್ಲಿ ಚೀನಿ ಪಡೆಗಳು ಈಗಾಗಲೇ ತಮ್ಮ ಹಲವಾರು ಡೇರೆಗಳನ್ನು ಹಾಗೂ ಬಂಕರ್‌ಗಳನ್ನು ತೆರವುಗೊಳಿಸಿರುವುದಾಗಿ ವರದಿಗಳು ಬಹಿರಂಗಪಡಿಸಿವೆ.
ಪಾಂಗೊಂಗ್ ಸರೋವರದ ದಂಡೆಗಳಿಂದ ಉಭಯ ದೇಶಗಳ ಸೇನಾಪಡೆಗಳ ಹಿಂತೆಗೆತ ಪ್ರಕ್ರಿಯೆಗೆ ಪೂರ್ಣಗೊಳ್ಳಲು ಇನ್ನೂ 6-7 ದಿನಗಳು ಬೇಕಾಗಬಹುದೆಂದು ರಕ್ಷಣಾ ಹಾಗೂ ಭದ್ರತಾ ಇಲಾಖೆಗಳ ಮೂಲಗಳು ಸೋಮವಾರ ತಿಳಿಸಿವೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಈಗಾಗಲೇ ತನ್ನ ಹಲವಾರು ಬಂಕರ್‌ಗಳು, ತಾತ್ಕಾಲಿಕ ಠಾಣೆಗಳು ಹಾಗೂ ಇತರ ಸಂರಚನೆಗಳನ್ನು ಪ್ಯಾಂಗೊಂಗ್ ಸರೋವರದ ಉತ್ತರ ದಂಡೆಯಿಂದ ತೆರವುಗೊಳಿಸಿದೆ ಹಾಗೂ ಆ ಪ್ರದೇಶದಲ್ಲಿ ತನ್ನ ಸೈನಿಕರ ಸಂಖ್ಯೆಯನ್ನು ಹಂತಹಂತವಾಗಿ ಕಡಿಮೆಗೊಳಿಸುತ್ತಿದೆ.
9 ಸುತ್ತಿನ ಮಾತುಕತೆಗಳ ಬಳಿಕ ಕಳೆದ ವಾರ ಅಂತಿಮಗೊಂಡಿರುವ ಸೇನಾ ಹಿಂತೆಗೆತ ಪ್ರಕ್ರಿಯೆಯನ್ನು ಮುನ್ನಡೆಸಲು ಉಭಯ ಸೇನಾಪಡೆಗಳ ಫೀಲ್ಡ್ ಕಮಾಂಡರ್‌ಗಳು ಬಹುತೇಕವಾಗಿ ಪ್ರತಿದಿನವೂ ಪರಸ್ಪರ ಮಾತುಕತೆ ನಡೆಸುತ್ತಿದ್ದಾರೆ.
9 ತಿಂಗಳುಗಳ ಸಂಘರ್ಷಾವಸ್ಥೆಯ ಬಳಿಕ ಕಳೆದ ವಾರ ಉಭಯ ದೇಶಗಳ ಸೇನಾಪಡೆಗಳು ಪಾಂಗೊಂಗ್ ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆಗಳಿಂದ ಹಿಂದೆ ಸರಿಯುವ ಒಪ್ಪಂದಕ್ಕೆ ಬಂದಿದ್ದವು. ಹಂತಹಂತವಾಗಿ, ಸಮನ್ವಯತೆಯೊಂದಿಗೆ ಹಾಗೂ ಪರಿಶೀಲಿಸಬಹುದಾದ ರೀತಿಯಲ್ಲಿ ಸೇನಾಪಡೆಗಳನ್ನು ಹಿಂತೆಗೆಯಲು ನಿರ್ಧರಿಸಿದ್ದವು. ಬುಧವಾರದಿಂದ ಸೇನಾಪಡೆಗಳ ಹಿಂತೆಗೆತ ಪ್ರಕ್ರಿಯೆ ಆರಂಭಗೊಂಡಿದೆ.
ಈ ಒಪ್ಪಂದದ ಪ್ರಕಾರ, ಪಾಂಗೊಂಗ್ ಸರೋವರದ ಉತ್ತರ ದಂಡೆಯಲ್ಲಿರುವ ಫಿಂಗರ್ 8 ಪ್ರದೇಶದಿಂದ ಚೀನಾವು ತನ್ನ ಸೇನಾಪಡೆಗಳನ್ನು ಹಿಂತೆಗೆದು ಕೊಳ್ಳಬೇಕಾಗುತ್ತದೆ ಹಾಗೂ ಅದೇ ಪ್ರದೇಶದ ಫಿಂಗರ್ 3 ಸಮೀಪದ ಧನ್‌ಸಿಂಗ್ ತಾಪಾ ಪೋಸ್ಟ್‌ನಲ್ಲಿರುವ ಖಾಯಂ ನೆಲೆಗೆ ಭಾರತೀಯ ಪಡೆಗಳು ವಾಪಾಸಾಗಲಿವೆ. ಪ್ಯಾಂಗೊಂಗ್ ಸರೋವರದ ದಕ್ಷಿಣ ದಂಡೆಯಲ್ಲಿಯೂ ಕೂಡಾ ಇದೇ ರೀತಿಯಾಗಿ ಸೇನಾ ಹಿಂತೆಗೆತ ಪ್ರಕ್ರಿಯೆ ನಡೆಯಲಿದೆಯೆಂದು ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್ ಕಳೆದ ವಾರ ಲೋಕಸಭೆಗೆ ತಿಳಿಸಿದ್ದರು.







