ಉಳ್ಳಾಲ ಸರಕಾರಿ ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸಾ ಘಟಕಕ್ಕೆ ಅನುದಾನ ಬಿಡುಗಡೆ: ಶಾಸಕ ಯು.ಟಿ. ಖಾದರ್
ಮಂಗಳೂರು, ಫೆ.16: ಉಳ್ಳಾಲದ ಸರಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಆಯುರ್ವೇದ ಚಿಕಿತ್ಸಾ ಘಟಕ ನಿರ್ಮಾಣಕ್ಕೆ ಸರಕಾರದಿಂದ 35 ಲ.ರೂ. ಅನುದಾನ ಬಿಡುಗಡೆಯಾಗಿದೆ. ಇದರ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುರ್ವೇದ ಚಿಕಿತ್ಸೆಗೂ ಬೇಡಿಕೆ ಇದೆ. ಹಾಗಾಗಿ ಆಲೋಪತಿ ಮತ್ತು ಆಯುರ್ವೇದ ಚಿಕಿತ್ಸೆ ಒಂದೇ ಕಡೆ ದೊರೆತರೆ ರೋಗಿಗಳಿಗೆ ಅನುಕೂಲವಾಗುತ್ತದೆ. ಯಾವ ರೀತಿಯ ಚಿಕಿತ್ಸೆ ಬೇಕೋ ಅದನ್ನು ಆಯ್ಕೆ ಮಾಡಲು ಸಹಕಾರಿಯಾಗುತ್ತದೆ. ಈ ಆಯುರ್ವೇದ ಚಿಕಿತ್ಸಾ ಘಟಕದಲ್ಲಿ ಆಯುರ್ವೇದ, ಯುನಾನಿ, ಹೋಮಿಯೋಪತಿ, ಫಿಸಿಯೋಥೆರಪಿ, ಯೋಗ ಚಿಕಿತ್ಸೆಗಳು ದೊರೆಯಲಿವೆ. ಗ್ರಾಮೀಣ ಭಾಗದಲ್ಲಿ ಈ ರೀತಿ ಸರಕಾರಿ ಆಸ್ಪತ್ರೆಯಲ್ಲಿ ಆಲೋಪತಿ ಮತ್ತು ಆಯುರ್ವೇದ ಚಿಕಿತ್ಸೆ ಒಂದೇ ಕಡೆ ದೊರೆಯುವುದು ಜಿಲ್ಲೆಯಲ್ಲಿ ಇದೇ ಪ್ರಥಮ. ಹೆರಿಟೇಜ್ ಮಾದರಿಯಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯ ಬಿದ್ದರೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗುವುದು ಎಂದರು.
*ಟೂಲ್‌ಕಿಟ್: ಸಾಮಾಜಿಕ ಮಾಧ್ಯಮಗಳಲ್ಲಿ ‘ಟೂಲ್‌ಕಿಟ್’ ಎನ್ನುವುದು ಸಾಮಾನ್ಯ ಸಂಗತಿ. ಹಾಗಾಗಿ ಟೂಲ್‌ಕಿಟ್ ವಿಚಾರದಲ್ಲಿ ವಿದ್ಯಾರ್ಥಿ ದಿಶಾ ರವಿ ಅವರನ್ನು ಬಂಧಿಸಿರುವುದು ಖಂಡನೀಯ. ಸಾಮಾಜಿಕ ಜಾಲತಾಣದಲ್ಲಿ ಟೂಲ್‌ಕಿಟ್ ಎಂಬುದು ತೆರೆದ ದಾಖಲೆ. ಅದು ಗೌಪ್ಯ ವಿಚಾರವಲ್ಲ. ಎಲ್ಲ ರಾಜಕೀಯ ಪಕ್ಷಗಳ ಸಾಮಾಜಿಕ ಮಾಧ್ಯಮ ವಿಭಾಗಗಳಲ್ಲಿಯೂ ಇಂತಹ ‘ಟೂಲ್ ಕಿಟ್’ ಇರುತ್ತದೆ. ಟೂಲ್‌ಕಿಟ್ ಎಂಬುದು ಗಣ್ಯರ ಪ್ರವಾಸ ಪಟ್ಟಿಯಂತಹ ಮಾಹಿತಿಯ ವಿವರವಾಗಿದೆ. ಆದರೆ ಇದನ್ನು ಈಗ ಬಾಂಬ್‌ನಂತೆ ಚಿತ್ರಿಸುತ್ತಿರುವುದು ವಿಪರ್ಯಾಸ. ದಿಶಾ ರವಿ ತಮಗೆ ಬಂದ ‘ಟೂಲ್‌ಕಿಟ್’ನ್ನು ಫಾರ್ವರ್ಡ್ ಮಾಡಿದ್ದಾರೆ. ಅವರಾಗಿ ಅದನ್ನು ಸಿದ್ಧಪಡಿಸಿಲ್ಲ. ದಿಶಾ ರವಿಯನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರೂ ಕೂಡ ರಾಜ್ಯ ಸರಕಾರ ಮೌನವಾಗಿದೆ. ಕೇಂದ್ರ ಸರಕಾರದ ದಬ್ಬಾಳಿಕೆಗೆ ರಾಜ್ಯ ಸರಕಾರ ಶರಣಾಗಿದೆ. ಈ ಬಗ್ಗೆ ಸರಕಾರ ಸ್ಪಷ್ಟೀಕರಣ ನೀಡಬೇಕು ಎಂದು ಖಾದರ್ ಒತ್ತಾಯಿಸಿದರು.
*ಬಜೆಟ್‌ನಲ್ಲಿ ಘೋಷಣೆಗೆ ಮನವಿ
ರಾಜ್ಯ ಬಜೆಟ್ ಪೂರ್ವಭಾವಿ ಸಭೆ ನಡೆಸಿ ಜಿಲ್ಲೆಯ ಬೇಡಿಕೆ ಬಗ್ಗೆ ಸರಕಾರಕ್ಕೆ ಮನವಿ ಮಾಡಲು ಸಂಸದರಿಗೆ ಹೇಳಿದ್ದೆ. ಯಾವ ರೀತಿಯ ಯೋಜನೆ ಮಾಡಿಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ತುಂಬೆ-ಸಜಿಪ ಸೇತುವೆ ನಿರ್ಮಾಣ ಮಂಜೂರಾಗಿತ್ತು. ಅದನ್ನು ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದೇನೆ. ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಮೂಲಕ ನೀಡುವ ವಿದ್ಯಾರ್ಥಿವೇತನ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಇತರ ಯೋಜನೆಗಳು ನಿಂತು ಹೋಗಿವೆ. ಬಜೆಟ್‌ನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಅಗತ್ಯ ಅನುದಾನವನ್ನು ಒದಗಿಸಿ ಕೊಡಲು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಮಂಗಳೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಆರಂಭಿಸಲು ಸಂಸದರು ಒತ್ತಡ ಹಾಕಬೇಕು. ಈ ಹಿಂದೆ ಬಜೆಟ್‌ನಲ್ಲಿ ಘೋಷಣೆಯಾದ ಉಡುಪಿ-ಕೊಣಾಜೆ ನಾಲೇಜ್ ಮತ್ತು ಹೆಲ್ತ್ ಕಾರಿಡಾರ್, ಕೋಸ್ಟಲ್ ಟೂರಿಸಂ ಸರ್ಕಿಟ್, ಮೆಟ್ರೋ ಯೋಜನೆ ಕಾರ್ಯಗತಗೊಳ್ಳಬೇಕು ಎಂದು ಖಾದರ್ ಹೇಳಿದರು.
*ಯುಪಿಎಲ್ ಕ್ರಿಕೆಟ್ ಆರಂಭ
ಉಳ್ಳಾಲ ಕ್ರಿಕೆಟ್ ಬೋರ್ಡ್ ವತಿಯಿಂದ ಯು.ಟಿ.ಫರೀದ್ ಸ್ಮರಣಾರ್ಥ ಉಳ್ಳಾಲ ಸೀ ಗ್ರೌಂಡ್‌ನಲ್ಲಿ ಉಳ್ಳಾಲ ಪ್ರೀಮಿಯರ್ ಲೀಗ್(ಯುಪಿಎಲ್) ಫೆ.16ರಿಂದ 21ರವರೆಗೆ ನಡೆಯಲಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಮಂಗಳೂರು ವಿಧಾನಸಭಾ ಕ್ಷೇತ್ರದ ತಂಡಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದು ಪ್ರಥಮ ಬಹುಮಾನ 3 ಲ.ರೂ, ದ್ವಿತೀಯ ಬಹುಮಾನ 2 ಲ.ರೂ.ಗಳಾಗಿರುತ್ತವೆ. ಇದು ಯುಪಿಎಲ್‌ನ 7ನೇ ಆವೃತ್ತಿಯ ಪಂದ್ಯಾಕೂಟವಾಗಿದೆ. 21 ತಂಡಗಳು ನೋಂದಣಿಯಾಗಿದ್ದು ಅದರಲ್ಲಿ 14 ಫ್ರಾಂಚೈಸಿ ಮಾಡಿ ಬಿಡ್ಡಿಂಗ್ ನಡೆಸಿ ಐಪಿಎಲ್ ಮಾದರಿಯಲ್ಲಿ ಮಾಡಲಾಗಿದೆ ಎಂದು ಉಳ್ಳಾಲ ಕ್ರಿಕೆಟ್ ಬೋರ್ಡ್‌ನ ಅಧ್ಯಕ್ಷ ಫಯಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾಕ್ಷಿ, ಉಪಾಧ್ಯಕ್ಷ ಅಯೂಬ್, ಇಕ್ಬಾಲ್, ಹಸೈನಾರ್, ಅಲ್ತಾಫ್, ಮಯ್ಯದ್ದಿ, ನಝೀರ್ ಮತ್ತಿತರರು ಉಪಸ್ಥಿತರಿದ್ದರು.







