ಜಾತಿ ನಿಂದನೆ: ಆರೋಪಿ ಖುಲಾಸೆ
ಮಂಗಳೂರು, ಫೆ.16: ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಒಡ್ಡಿ ಹಲ್ಲೆ ಮಾಡಿದ್ದಾರೆಂಬ ಆರೋಪ ಹೊತ್ತಿದ್ದ ಕಾವೂರು ಕುಂಜತ್ತಬೈಲ್ ನಿವಾಸಿ ಭಾರತಿ ಶೆಟ್ಟಿ ಅವರನ್ನು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
ಅಕ್ಕ-ಪಕ್ಕದ ಮನೆಯಲ್ಲಿ ಇದ್ದುಕೊಂಡು ಕೊಳಚೆ ನೀರು ಹೋಗುವ ವಿಚಾರದಲ್ಲಿ ಮನಸ್ತಾಪ ಬಂದು ನೆರೆಮನೆಯವರು ಭಾರತಿ ಶೆಟ್ಟಿಯ ವಿರುದ್ಧ ದೂರು ಸಲ್ಲಿಸಿದ್ದರು. ಆರೋಪಿ ಮತ್ತು ಇತರರು ಸೇರಿಕೊಂಡು ದೂರುದಾರರಿಗೆ ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ನೀಡಿ, ಹಲ್ಲೆ ಮಾಡಿದ್ದರೆಂದು ಕಾವೂರು ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.
ದೂರಿನನ್ವಯ ಭಾರತೀಯ ದಂಡ ಸಂಹಿತೆ ಕಲಮು 504, 323, 506 ಆರ್/ಡಬ್ಲೂ 34 ಪ್ರಕಾರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ, ಕಲಮು 3(1)(ಎಕ್ಸ್) ಪ್ರಕಾರ ಕೇಸು ನ್ಯಾಯಾಲಯಕ್ಕೆ ದಾಖಲಾಗಿತ್ತು.
ಪ್ರತ್ಯಕ್ಷ ಸಾಕ್ಷಿಗಳ ಕೊರತೆ ಸಹಿತ ಹಲವು ಕಾರಣಗಳಿಗಾಗಿ ಆರೋಪಿ ಭಾರತಿ ಶೆಟ್ಟಿ ಅವರನ್ನು ನ್ಯಾಯಾಲಯ ನಿರ್ದೋಷಿ ಎಂದು ಘೋಷಿಸಿ, ಬಿಡುಗಡೆಗೊಳಿಸಿದೆ. ಆರೋಪಿ ಪರವಾಗಿ ನ್ಯಾಯವಾದಿ ಶಶಿರಾಜ್ ಕಾವೂರು ವಾದಿಸಿದ್ದರು.





