ಭಾರತವನ್ನು ಜಾಗೃತಗೊಳಿಸಿದ ಸ್ವಾಮಿ ವಿವೇಕಾನಂದರು: ಸ್ವಾಮಿ ಮಂಗಳನಾಥಾನಂದ

ಮಂಗಳೂರು, ಫೆ.16: ಪರಕೀಯರ ದಾಳಿಗೆ ತುತ್ತಾಗಿ ಸ್ವಂತಿಕೆ ಕಳೆದುಕೊಂಡು ಸುದೀರ್ಘ ನಿದ್ರೆಯಲ್ಲಿದ್ದ ಭಾರತವನ್ನು ಸ್ವಾಮಿ ವಿವೇಕಾನಂದರು ಜಾಗೃತಗೊಳಿಸಿದರು ಎಂದು ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ಮಂಗಳನಾಥಾನಂದ ತಿಳಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಮತ್ತು ಮಂಗಳೂರು ರಾಮಕೃಷ್ಣ ಮಠದ ಆಶ್ರಯದಲ್ಲಿ, ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತುಯೋಗ ವಿಜ್ಞಾನ ವಿಭಾಗದ ಸಭಾಂಗಣದಲ್ಲಿ ನಡೆದ ವಿವೇಕ ವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಮೊದಲನೇ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಅಮೆರಿಕದ ನೆಲದಲ್ಲಿ ಭಾರತದ ಆಧ್ಯಾತ್ಮಿಕ ವೈಭವವನ್ನು ಅಲ್ಲಿನ ಜನರಿಗೆ ತಿಳಿಸುವ ಮೂಲಕ ಭಾರತದ ಪುನರುತ್ಥಾನಕ್ಕೆ ಮುನ್ನುಡಿ ಹಾಡಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು. ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ‘ಅನಂತ ಆಯಾಮಗಳು’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಕೆ. ಕೃಷ್ಣ ಶರ್ಮ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು. ವಿವೇಕಾನಂದ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ.ಶ್ರೀಪತಿ ಕಲ್ಲೂರಾಯ ಪಿ. ಸ್ವಾಗತಿಸಿ, ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಚಂದ್ರು ಹೆಗ್ಡೆ ವಂದಿಸಿದರು. ಮಂಗಳೂರು ರಾಮಕೃಷ್ಣ ಮಠದ ಸ್ವಯಂಸೇವಕ ರಂಜನ್ ಬೆಳ್ಳರ್ಪಾಡಿ ಕಾರ್ಯಕ್ರಮ ನಿರೂಪಿಸಿದರು.







