ಬಡಜನರಿಗೆ ಸಹಕಾರ ನಮ್ಮ ಜವಾಬ್ದಾರಿ: ಇಸ್ಮಾಯಿಲ್ ಶಾಫಿ

ಕೊಣಾಜೆ: ಬಡಕುಟುಂಬಗಳಿಗೆ ಸಹಕಾರ ನೀಡುವುದು ಸರ್ವರ ಜವಾಬ್ದಾರಿ, ಆ ನಿಟ್ಟಿನಲ್ಲಿ ಸಂಘಟನೆ ಕಾರ್ಯಾಚರಿಸುತ್ತಿದ್ದು ಸಮುದಾಯ ಸಹಕಾರ ನೀಡಬೇಕು ಎಂದು ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅಭಿಪ್ರಾಯಪಟ್ಟರು.
ಪಾವೂರು ಗ್ರಾಮದ ಇನೋಳಿ ಕಂಬಳಪದವಿನಲ್ಲಿ ಆರ್ಥಿಕವಾಗಿ ಹಿಂದುಳಿದ ವಯೋವೃದ್ಧೆ ಬೀಫಾತಿಮ ಎಂಬವರ ಅನುಕೂಲಕ್ಕಾಗಿ ಬೆಡ್ ಆಧಾರಿತ ವೀಲ್ ಚೆಯರ್ ಸೋಮವಾರ ಹಸ್ತಾಂತರಿಸಿ ಮಾತನಾಡಿದರು.
ಪಾವೂರು ಗ್ರಾಮ ಪಂಚಾಯಿತಿ ಸದಸ್ಯ ವಲೇರಿಯನ್ ಡಿಸೋಜ ಮಾತನಾಡಿ, ವೈಯಕ್ತಿಕ ಅಥವಾ ಸಂಘಟನೆ ನೆಲೆಯಲ್ಲಿ ನೊಂದವರಿಗೆ ಸಹಾಯ ಮಾಡಿ ಮಾನವೀಯತೆ ಮೆರೆಯುವುದು ಧರ್ಮವಾಗಿದೆ. ಇಂತಹ ಕಾರ್ಯಗಳಿಗೆ ಪಂಚಾಯಿತಿಯಿಂದ ಸಹಕಾರ ನೀಡಲು ಸಿದ್ಧ ಎಂದು ಹೇಳಿದರು.
ಈ ಸಂದರ್ಭ ಅಂತರಾಷ್ಟ್ರೀಯ ಮಾನವ ಹಕ್ಕು ಸಮಿತಿಯ ಜಿಲ್ಲಾಧ್ಯಕ್ಷೆ ಹಸೀನಾ ಇಸ್ಮಾಯಿಲ್, ಪಾವೂರು ಗ್ರಾಮ ಪಂಚಾಯಿತಿ ಸದಸ್ಯೆ ಚಂದ್ರಾವತಿ ಪೂಜಾರಿ, ಸಾಮಾಜಿಕ ಕಾರ್ಯಕರ್ತೆ ಅಸುಂತಾ ಡಿಸೋಜ, ಇನೋಳಿ ಬಿ.ಸೈಟ್ ಮಸ್ಜಿದುರ್ರಹ್ಮಾನ್ ಅಧ್ಯಕ್ಷ ಟಿ.ಎಚ್.ನಝೀರ್, ಉದ್ಯಮಿ ವಿನ್ಸೆಂಟ್ ಲೋಬೋ, ಅಂಗನವಾಡಿ ಕಾರ್ಯಕರ್ತೆಯರಾದ ಸರಸ್ವತಿ, ಪ್ರೇಮಾ, ಫಾತಿಮಾ ಇನ್ನಿತರರು ಉಪಸ್ಥಿತರಿದ್ದರು.





