ವಕ್ಫ್ ಆಸ್ತಿ ಕಬಳಿಕೆ ಪ್ರಕರಣ: ಅನ್ವರ್ ಮಾಣಿಪ್ಪಾಡಿ ವರದಿ ತನಿಖೆ ಸಿಬಿಐಗೆ ಒಪ್ಪಿಸಲು ಆಗ್ರಹ
ಬೆಂಗಳೂರು, ಫೆ.16: ರಾಜ್ಯವ್ಯಾಪಿ ವಕ್ಫ್ ಬೋರ್ಡ್ ಅಡಿಯಲ್ಲಿನ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಕಬಳಿಕೆ ಪ್ರಕರಣವನ್ನು ರಾಜ್ಯ ಸರಕಾರ ಈ ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಅತೀಫ್ ರಶೀದ್ ಆಗ್ರಹಿಸಿದರು.
ಮಂಗಳವಾರ ನಗರದಲ್ಲಿ ಖಾಸಗಿ ಹೊಟೇಲ್‍ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳ ಕುರಿತು ಸರಕಾರಿ ಮತ್ತು ಖಾಸಗಿ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ವಕ್ಫ್ ಮಂಡಳಿ ಸ್ಥಿರಾಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಅಂದಿನ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ಸಂಕ್ಷಿಪ್ತ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದಾರೆ. ಇದನ್ನು ಲೋಕಾಯುಕ್ತ ಮತ್ತು ಹೈಕೋರ್ಟ್ ಸಹ ಒಪ್ಪಿವೆ. ಹಾಗಾಗಿ, ರಾಜ್ಯ ಸರಕಾರ ವಿಳಂಬ ಮಾಡದೆ, ಸಿಬಿಐ ತನಿಖೆಗೆ ನೀಡಬೇಕು ಎಂದು ಅವರು ಹೇಳಿದರು.
ಈ ವರದಿಯಲ್ಲಿ ರಾಜ್ಯದೆಲ್ಲೆಡೆ ವಕ್ಫ್ ಆಸ್ತಿ ಕಬಳಿಕೆಯಲ್ಲಿ 2.30 ಲಕ್ಷ ಕೋಟಿ ರೂ.ಗಳ ಅವ್ಯವಹಾರ ಆಗಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ, ಈ ರಾಜ್ಯದ 55 ಪ್ರಭಾವಿ ಕುಟುಂಬಗಳೇ ಹೆಚ್ಚು ವಕ್ಫ್ ಆಸ್ತಿ ಕಬಳಿಕೆ ಮಾಡಿರುವ ಗಂಭೀರ ಆರೋಪವೂ ಇದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉನ್ನತ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸುವ ಅಗತ್ಯತೆ ಹೆಚ್ಚಿದೆ ಎಂದು ತಿಳಿಸಿದರು.
ಅಲ್ಪಸಂಖ್ಯಾತರ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಜತೆಗೆ, ವಿದ್ಯಾರ್ಥಿ ವೇತನ ಇನ್ನಿತರೆ ಯೋಜನೆಗಳು ರಾಜ್ಯ ಮತ್ತು ಕೇಂದ್ರ ಸರಕಾರಗಳು ಮುಂದುವರಿಸುವ ಭರವಸೆ ಇದೆ ಎಂದು ಅವರು ಹೇಳಿದರು.
ಡ್ರಗ್ಸ್ ಗೆ ಮಟ್ಟ: ಅಲ್ಪಸಂಖ್ಯಾತರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಸಾಗಾಟ ಜಾಲ ತಲೆ ಎತ್ತಿದ್ದು, ಇದನ್ನು ಮಟ್ಟ ಹಾಕಲು ಠಾಣಾ ವ್ಯಾಪ್ತಿಯಲ್ಲಿ ಕಾನೂನಾತ್ಮಕ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು. ಅದೇ ರೀತಿ, ಸಂಘ-ಸಂಸ್ಥೆಗಳೊಂದಿಗೆ ಜೊತೆಗೂಡಿ ಜಾಗೃತಿ ಮೂಡಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಂ, ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಹಾಗೂ ಅಲ್ಪಸಂಖ್ಯಾತರ ಆಯೋಗದ ಪ್ರಭಾರಿ ಕಾರ್ಯದರ್ಶಿ ಮಹಬೂಬ್ ಸಾಬ್ ಸೇರಿದಂತೆ ಪ್ರಮುಖರಿದ್ದರು.







