ತಜ್ಞರೊಂದಿಗೆ ಚರ್ಚಿಸಿ ಜಾತಿ ಪ್ರಮಾಣ ಪತ್ರ ಹಂಚಿಕೆ: ಸಚಿವ ಶ್ರೀರಾಮುಲು

ಕಾರವಾರ, ಫೆ.16: ಕಾನೂನು ಹಾಗೂ ವಿಷಯ ತಜ್ಞರ ಜೊತೆ ಕೂಲಂಕಷವಾಗಿ ಚರ್ಚಿಸಿದ ನಂತರವೇ ಯಾವ ಯಾವ ಸಮುದಾಯವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಜಾತಿ ಪ್ರಮಾಣ ಪತ್ರ ನೀಡಬೇಕು ಎನ್ನುವುದರ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಆಗುತ್ತಿರುವ ತೊಂದರೆಗಳ ಕುರಿತು ಸಭೆ ನಡೆಸಿ ಅವರು ಮಾತನಾಡಿದರು.
ಜಾತಿ ಸಂಬಂಧಿಸಿದ ವಿಷಯಗಳು ತುಂಬಾ ಸೂಕ್ಷ್ಮವಾಗಿದ್ದು, ಆತುರದ ನಿರ್ಣಯಗಳನ್ನು ಕೈಗೊಳ್ಳದೇ, ಆಯಾ ಸಮುದಾಯಗಳ ಕುರಿತು ಸಮಗ್ರ ಅಧ್ಯಯನ ಹಾಗೂ ತಜ್ಞರೊಂದಿಗೆ ಚರ್ಚಿಸಿ ಜಾತಿ ಪ್ರಮಾಣ ಪತ್ರ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಕೆಲವು ಸಮುದಾಯಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಂವಿಧಾನಿಕ ಮತ್ತು ಕಾನೂನಾತ್ಮಕ ತೊಡುಕುಗಳಿರುವುದರಿಂದ ಅವುಗಳನ್ನು ಪರಿಶೀಲಿಸಿ ಪರಿಹಾರ ಕಂಡುಕೊಂಡು ಶೀಘ್ರದಲ್ಲಿಯೇ ಅಂತಿಮ ತಿರ್ಮಾನಕ್ಕೆ ಬರಲಾಗುವುದು ಎಂದರು. ಇದೇ ಸಂದರ್ಭ ಮೋಗೆರ ಸಮುದಾಯದ ಮುಖಂಡರು, ಗೊಂಡ ಸಮುದಾಯದ ಮುಖಂಡರು, ಅಲೆಮಾರಿ- ಅರೆ ಅಲೆಮಾರಿ, ಸಿದ್ಧಿ, ಮೆತ್ರಿ ಸಮುದಾಯದ ಮುಖಂಡರು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಿಲ್ಲಾ ಸಮಿತಿ ಸದಸ್ಯರು ತಮ್ಮ ಅಹವಾಲುಗಳನ್ನು ಸಚಿವರ ಮುಂದೆ ಇಟ್ಟರು.
ಈ ಸಂದರ್ದಲ್ಲಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ಎಸ್ಪಿ ಶಿವಪ್ರಕಾಶ ದೇವರಾಜ, ಸಿಇಒ ಪ್ರಿಯಾಂಗಾ ಎಮ್., ಅಪರ ಜಿಲ್ಲಾಧಿಕಾರಿ ಎಚ್. ಕೆ. ಕೃಷ್ಣಮೂರ್ತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇದ್ದರು.







