ಬಾಂಗ್ಲಾದೇಶದ ಬ್ಲಾಗರ್ ಹತ್ಯೆ: 5 ಮಂದಿಗೆ ಮರಣ ದಂಡನೆ
ಢಾಕಾ (ಬಾಂಗ್ಲಾದೇಶ), ಫೆ. 16: ಉಗ್ರವಾದವನ್ನು ವಿರೋಧಿಸುವ ಅಮೆರಿಕದ ಬ್ಲಾಗರ್ ಒಬ್ಬರನ್ನು ಆರು ವರ್ಷಗಳ ಹಿಂದೆ ಹತ್ಯೆ ಮಾಡಿದ ಪ್ರಕರಣದಲ್ಲಿ ಬಾಂಗ್ಲಾದೇಶದ ನ್ಯಾಯಾಲಯವೊಂದು ಮಂಗಳವಾರ ಭಯೋತ್ಪಾದಕ ಗುಂಪೊಂದರ ಐವರು ಸದಸ್ಯರಿಗೆ ಮರಣ ದಂಡನೆ ವಿಧಿಸಿದೆ.
ಬಾಂಗ್ಲಾದೇಶ ಮೂಲದ ಅಮೆರಿಕ ಪ್ರಜೆ ಅವಿಜಿತ್ ರಾಯ್ 2015ರ ಫೆಬ್ರವರಿಯಲ್ಲಿ ಢಾಕಾ ಪುಸ್ತಕ ಮೇಳವೊಂದರಿಂದ ತನ್ನ ಪತ್ನಿ ಜೊತೆಗೆ ವಾಪಸಾಗುತ್ತಿದ್ದಾಗ ಹಂತಕರ ತಂಡವೊಂದು ಅವರನ್ನು ತಲವಾರುಗಳಿಂದ ಕಡಿದು ಕೊಂದಿತ್ತು. ಅವರ ಪತ್ನಿ ಹಾಗೂ ಬ್ಲಾಗರ್ ರಫೀದಾ ಅಹ್ಮದ್‌ರ ತಲೆಗೆ ಗಾಯವಾಗಿತ್ತು ಹಾಗೂ ಅವರು ಒಂದು ಬೆರಳನ್ನು ಕಳೆದುಕೊಂಡಿದ್ದಾರೆ.
‘‘ಹಂತಕರ ವಿರುದ್ಧದ ಆರೋಪಗಳು ಯಾವುದೇ ಸಂಶಯವಿಲ್ಲದೆ ಸಾಬೀತಾಗಿದೆ. ನ್ಯಾಯಾಲಯವು ಅವರಿಗೆ ಗರಿಷ್ಠ ಶಿಕ್ಷೆಯನ್ನು ನೀಡಿದೆ’’ ಎಂದು ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಬ್ಲಿಕ್ ಪ್ರಾಸಿಕ್ಯೂಟರ್ ಗೋಲಮ್ ಸರ್ವಾರ್ ಖಾನ್ ತಿಳಿಸಿದರು.
ತೀರ್ಪು ನೀಡಿದ ಢಾಕಾದ ವಿಶೇಷ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿತ್ತು.
2013 ಮತ್ತು 2016ರ ನಡುವಿನ ಅವಧಿಯಲ್ಲಿ ಬ್ಲಾಗರ್‌ಗಳು, ಜಾತ್ಯತೀತ ಕಾರ್ಯಕರ್ತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹಲವಾರು ದಾಳಿಗಳು ನಡೆದಿದ್ದವು.







