ಮಾನನಷ್ಟ ಮೊಕದ್ದಮೆ ಪ್ರಕರಣ: ಪ್ರಿಯಾ ರಮಣಿಯವರನ್ನು ಖುಲಾಸೆಗೊಳಿಸಿದ ದಿಲ್ಲಿ ನ್ಯಾಯಾಲಯ
ಎಂ.ಜೆ. ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪತ್ರಕರ್ತೆ

ಹೊಸದಿಲ್ಲಿ,ಫೆ.18: ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ಅವರನ್ನು ದಿಲ್ಲಿ ನ್ಯಾಯಾಲಯ ಬುಧವಾರ ದೋಷಮುಕ್ತಗೊಳಿಸಿದೆ. 2018ರಲ್ಲಿ ನಡೆದ ‘ಮಿ ಟೂ’ ಟ್ವಿಟರ್ ಆಭಿಯಾನದಲ್ಲಿ ಪ್ರಿಯಾ ರಮಣಿ ಅವರು, ಎಂ.ಜೆ. ಅಕ್ಬರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದರು. ಇದರ ವಿರುದ್ಧ ಎಂ.ಜೆ. ಅಕ್ಬರ್ ಅವರು 2018ರ ಅಕ್ಟೋಬರ್ 15ರಂದು ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ದಿಲ್ಲಿಯ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಅವರು ಫೆ.1ರಂದು ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಫೆ.17ಕ್ಕೆ ತೀರ್ಪನ್ನು ಕಾದಿರಿಸಿದ್ದರು.
ಇಂದು ತೀರ್ಪು ಪ್ರಕಟಿಸಿದ ರವೀಂದ್ರ ಕುಮಾರ್, ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಆರೋಪಿ ಪ್ರಿಯಾ ರಮಣಿ ಅವರನ್ನು ದೋಷಮುಕ್ತಗೊಳಿಸಿದರು.‘‘ ಲೈಂಗಿಕ ಕಿರುಕುಳದಿಂದ ಸಂತ್ರಸ್ತರ ಮೇಲಾಗುವ ಪರಿಣಾಮವನ್ನು ಸಮಾಜವು ಅರಿತುಕೊಳ್ಳಬೇಕು. ಅನ್ಯಾಯಕ್ಕೊಳಗಾಗಿ ದಶಕಗಳಾದ ಬಳಿಕವೂ ಮಹಿಳೆಗೆ ತನ್ನ ನೋವನ್ನು ಹೇಳುವ ಹಕ್ಕಿದೆ’’ ಎಂದು ತೀರ್ಪಿನಲ್ಲಿ ಹೇಳಿದ್ದಾರೆ. ಕೆಲಸದ ಸ್ಥಳಗಳಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳವನ್ನು ವಿರೋಧಿಸುವ ಹಿತದೃಷ್ಟಿಯಿಂದ ಪ್ರಿಯಾ ರಮಣಿ ಅವರು ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆಂದು ನ್ಯಾಯಾಲಯ ಅಭಿಪ್ರಾಯಿಸಿತು.
ಉನ್ನತ ಸಾಮಾಜಿಕ ಸ್ಥಾನಮಾನವನ್ನು ಹೊಂದಿರುವ ವ್ಯಕ್ತಿಯೂ ಲೈಂಗಿಕ ಶೋಷಕನಾಗಿರುವ ಸಾಧ್ಯತೆಯಿರುತ್ತದೆ.ಮಹಿಳೆಯ ಘನತೆಯ ಬೆಲೆತೆತ್ತು ವ್ಯಕ್ತಿಯೊಬ್ಬನ ಪ್ರತಿಷ್ಠೆಯ ಹಕ್ಕನ್ನು ಸಂರಕ್ಷಿಸಲು ಸಾಧ್ಯವಿಲ್ಲವೆಂದು ನ್ಯಾಯಾಧೀಶರು ತೀರ್ಪಿನಲ್ಲಿ ಅಭಿಪ್ರಾಯಿಸಿದರು.
2017ರಲ್ಲಿ ಪ್ರಿಯಾ ರಮಣಿ ಅವರು ವೋಗ್ ಆಂಗ್ಲ ನಿಯತಕಾಲಿಕಕ್ಕೆ ಬರೆದ ಲೇಖನವೊಂದರಲ್ಲಿ, ಪತ್ರಿಕೆಯೊಂದರಲ್ಲಿ ಉದ್ಯೋಗಕ್ಕಾಗಿ ಸಂದರ್ಶನದ ಸಂದರ್ಭದಲ್ಲಿ ತಾನು ಪತ್ರಿಕಾಸಂಸ್ಥೆಯ ಮುಖ್ಯಸ್ಥನಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದೆ ಎಂಬುದಾಗಿ ಹೇಳಿದ್ದರು.
ಒಂದು ವರ್ಷದ ಆನಂತರ ಟ್ವಿಟ್ಟರ್‌ನಲ್ಲಿ ನಡೆದ ಮೀ ಟೂ ಆಂದೋಲನ ದಲ್ಲಿ ಪ್ರಿಯಾ ಅವರು, ತನಗೆ ಕಿರುಕುಳ ನೀಡಿದ್ದ ವ್ಯಕ್ತಿ ಎಂ.ಜೆ. ಅಕ್ಬರ್ ಎಂಬು ದಾಗಿ ಬಹಿರಂಗಪಡಿಸಿದ್ದರು. ‘ಮೀ ಟೂ’ ಆಂದೋಲನದಲ್ಲಿ ಪಾಲ್ಗೊಂಡ ಇತರ ಕೆಲವು ಮಹಿಳೆಯರು ಕೂಡಾ ಎಂ.ಜೆ. ಅಕ್ಬರ್ ವಿರುದ್ಧ ಲೈಂಗಿಕ ದುರ್ನಡತೆಯ ಆರೋಪ ಹೊರಿಸಿದ್ದರು.
ಪ್ರಿಯಾ ರಮಣಿ ತನ್ನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ ಬಳಿಕ ಎಂ.ಜೆ. ಅಕ್ಬರ್ ಅವರು ಅ.17ರಂದು ತನ್ನ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ತನ್ನ ವಿರುದ್ಧ ಹೊರಿಸಲಾದ ಆರೋಪಗಳನ್ನು ಅಲ್ಲಗಳೆದಿದ್ದರು.
ಕೇವಲ ಧ್ವನಿಯೆತ್ತಿದ್ದಕ್ಕಾಗಿ ನಾನು ಆರೋಪಿಯಾಗಿದ್ದೆ: ಪ್ರಿಯಾ
ನ್ಯಾಯಾಲಯದ ತೀರ್ಪಿಗೆ ಪ್ರಿಯಾ ರಮಣಿ ಅವರು ಸಂತಸ ವ್ಯಕ್ತಪಡಿಸಿದ್ದು, ಇದರಿಂದಾಗಿ ಇನ್ನೂ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಧ್ವನಿಯೆತ್ತಲು ಉತ್ತೇಜನ ದೊರೆತಿದೆ ಎಂದರು. ಸಂತ್ರಸ್ತರನ್ನು ನ್ಯಾಯಾಲಯಕ್ಕೆ ಎಳೆದೊಯ್ಯುವ ಮುನ್ನ ಪ್ರಭಾವಿ ಪುರುಷರು ಎರಡು ಬಾರಿ ಯೋಚಿಸಬೇಕಾದಂತಹ ಪರಿಣಾಮವನ್ನು ಈ ತೀರ್ಪು ಸೃಷ್ಟಿಸಿದೆ ಎಂದವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ನಾನೊಬ್ಬಳು ಆರೋಪಿಯಾಗಿದ್ದೇನೆಂಬುದನ್ನು ಮರೆಯದಿರಿ ಹಾಗೂ ಕೇವಲ ಧ್ವನಿಯೆತ್ತಿದ್ದಕ್ಕಾಗಿ ನಾನು ಆರೋಪಿಯಾಗಿದ್ದೆ ರಮಣಿ ತಿಳಿಸಿದ್ದಾರೆ.
ಲೈಂಗಿಕ ಕಿರುಕುಳದ ವಿರುದ್ಧ ಧ್ವನಿಯೆತ್ತಿದ ಎಲ್ಲಾ ಮಹಿಳೆಯರ ಪರವಾಗಿ ದೊರೆತ ಸಮರ್ಥನೆ ಇದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ತನ್ನ ಪರವಾಗಿ ಸಾಕ್ಷಿ ನುಡಿದ ಗಝಾಲಾ ವಹಾಬ್ ಹಾಗೂ ನಿಲೋಫರ್ ವೆಂಕಟರಾಮನ್ ಅವರಿಗೂ ರಮಣಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.







