ರಾಹುಲ್ ಗಾಂಧಿ ದಲಿತ ಯುವತಿಯನ್ನು ವಿವಾಹವಾಗಲಿ: ಕೇಂದ್ರ ಸಚಿವ ರಾಮದಾಸ್ ಅಠಾವಳೆ

ಹೊಸದಿಲ್ಲಿ : 'ಹಮ್ ದೋ, ಹಮಾರೆ ದೋ,' ಸಿದ್ಧಾಂತವನ್ನು ಪ್ರತಿಪಾದಿಸಬೇಕಾದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಲಿತ ಯುವತಿಯನ್ನು ವಿವಾಹವಾಗಬೇಕೆಂದು ಕೇಂದ್ರ ಸಚಿವ ಹಾಗೂ ದಲಿತ ನಾಯಕ ರಾಮದಾಸ್ ಅಠಾವಳೆ ಹೇಳಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸಚಿವಾಲಯ ಅಂತರ್ಜಾತಿ ವಿವಾಹಕ್ಕೆ ನೀಡಲಾಗುವ ರೂ. 2.5 ಲಕ್ಷ ಯೋಜನೆಯ ಪ್ರಯೋಜನವನ್ನೂ ರಾಹುಲ್‌ಗೆ ನೀಡುವುದಾಗಿ ಅಠಾವಳೆ ಹೇಳಿದ್ದಾರೆ.
ಇತ್ತೀಚೆಗೆ ರಾಹುಲ್ ಅವರು ರೈತರ ಹೋರಾಟ ಹಾಗೂ ಬೇಡಿಕೆಗಳ ಕುರಿತು ಪ್ರತಿಕ್ರಿಯಿಸಿ ಈಗಿನ ಸರಕಾರ 'ಹಮ್ ದೋ ಹಮಾರೆ ದೋ' ಆಗಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ವ್ಯಂಗ್ಯವಾಡಿದ್ದರು.
"ಹಿಂದೆ ಹಮ್ ದೋ, ಹಮಾರೆ ದೋ ಘೋಷವಾಕ್ಯವನ್ನು ಕುಟುಂಬ ಯೋಜನೆಗಾಗಿ ಬಳಸಲಾಗುತ್ತಿತ್ತು. ಇದನ್ನು ಪ್ರೋತ್ಸಾಹಿಸಬೇಕೆಂದಿದ್ದರೆ ಅವರು (ರಾಹುಲ್ ಗಾಂಧಿ) ವಿವಾಹವಾಗಬೇಕು, ಅವರು ದಲಿತ ಯುವತಿಯನ್ನು ವಿವಾಹವಾಗಿ ಜಾತಿ ವ್ಯವಸ್ಥೆಯನ್ನು ಅಂತ್ಯಗೊಳಿಸುವ ಮಹಾತ್ಮ ಗಾಂಧಿಯ ಕನಸನ್ನು ಸಾಕಾರಗೊಳಿಸಬೇಕು, ಇಂತಹ ಕ್ರಮ ಯುವಜನತೆಗೂ ಸ್ಫೂರ್ತಿದಾಯಕ,'' ಎಂದು ಅಠಾವಳೆ ಹೇಳಿದ್ದಾರೆ.





